ಸಾರಾಂಶ
ದುಬೈ: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ 9ನೇ ಆವೃತ್ತಿ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಆಸೀಸ್‌ಗೆ ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್ ಹೀನಾಯ ಸೋಲು ಎದುರಾಯಿತು. ಈ ಮೂಲಕ ದಕ್ಷಿಣ ಆಫ್ರಿಕಾ ಸತತ 2ನೇ ಬಾರಿ ಫೈನಲ್‌ಗೆ ಪ್ರವೇಶಿಸಿತು.
ಜೊತೆಗೆ, ಕಳೆದ ಬಾರಿ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು.ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 5 ವಿಕೆಟ್‌ಗೆ 134 ರನ್ ಕಲೆಹಾಕಿತು. ಬೆಥ್ ಮೂನಿ 44, ಎಲೈಸಿ ಪೆರ್ರಿ 31, ತಹಿಲಾ ಮೆಗ್ರಾಥ್ 27 ಹಾಗೂ ಫೋಬೆ ಲಿಚ್‌ಫೀಲ್ಡ್ 16 ರನ್ ಕೊಡುಗೆ ನೀಡಿದರು. ಅಯಾಬೊಂಗಾ ಖಾಕ 2 ವಿಕೆಟ್ ಕಿತ್ತರು. ಸ್ಪರ್ಧಾತ್ಮಕ ಗುರಿಯನ್ನು ದ.ಆಫ್ರಿಕಾ ಕೇವಲ 17.2 ಓವರ್‌ಗಳಲ್ಲೇ ಬೆನ್ನತ್ತಿ ಜಯಭೇರಿ ಮೊಳಗಿಸಿತು.
ಅನ್ನೆಕೆ ಬಾಶ್ ಕೇವಲ 48 ಎಸೆತಗಳಲ್ಲಿ 74 ರನ್ ಸಿಡಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ನಾಯಕಿ ಲಾರಾ ವೊಲ್ವಾರ್ಟ್ 42 ರನ್ ಗಳಿಸಿದರು. ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.
ಇಂದು ವಿಂಡೀಸ್-ಕಿವೀಸ್ ಸೆಮೀಸ್
ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯ ಶುಕ್ರವಾರ ನಡೆಯಲಿದ್ದು, ವೆಸ್ಟ್‌ಇಂಡೀಸ್ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ. ವಿಂಡೀಸ್ 2ನೇ ಬಾರಿ, ಕಿವೀಸ್ 3ನೇ ಬಾರಿ ಫೈನಲ್ ಪ್ರವೇಶಿಸುವ ಕಾತರದಲ್ಲಿವೆ.