ಸಾರಾಂಶ
ಬರ್ಲಿನ್(ಜರ್ಮನಿ): ಯುರೋಪಿಯನ್ ಫುಟ್ಬಾಲ್‌ನ ರಾಜನಾಗಿ ಮತ್ತೆ ಸ್ಪೇನ್ ಮೆರೆದಾಡಿದೆ. ಯುರೋಪ್ ದೇಶಗಳ ನಡುವಿನ ಫುಟ್ಬಾಲ್ ಟೂರ್ನಿಯಾಗಿರುವ ಪ್ರತಿಷ್ಠಿತ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪೇನ್ 4ನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡಿದೆ.
ಇದರೊಂದಿಗೆ ಇಂಗ್ಲೆಂಡ್ ತನ್ನ ಚೊಚ್ಚಲ ಯುರೋ ಕಪ್ ಕನಸು ಸಾಕಾರಗೊಳ್ಳಲು ಮತ್ತಷ್ಟು ಸಮಯ ಕಾಯುವಂತಾಗಿದೆ.ಭಾನುವಾರ ಮಧ್ಯರಾತ್ರಿ ನಡೆದ ಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪೇನ್ 2-1 ಗೋಲುಗಳ ರೋಚಕ ಗೆಲುವು ಸಾಧಿಸಿತು. ಟೂರ್ನಿಯುದ್ದಕ್ಕೂ ಪರಾಕ್ರಮ ಮೆರೆದು, ಬಲಿಷ್ಠ ತಂಡಗಳನ್ನು ಮಣಿಸಿದ್ದ ಸ್ಪೇನ್ ಫೈನಲ್‌ನಲ್ಲೂ ಇಂಗ್ಲೆಂಡ್ ಮೇಲೆ ಪ್ರಾಬಲ್ಯ ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.
ನಿಕೋ ವಿಲಿಯಮ್ಸ್ 47ನೇ ನಿಮಿಷದಲ್ಲಿ ಗೋಲು ಬಾರಿಸಿ ಸ್ಪೇನ್‌ಗೆ ಮುನ್ನಡೆ ಒದಗಿಸಿದರೂ, 73ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಕೋಲ್ ಪಾವರ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದ್ದರಿಂದ ಪಂದ್ಯ ಸಮಬಲಗೊಂಡಿತು. ಆದರೆ ಬದಲಿ ಆಟಗಾರನಾಗಿ ಮೈದಾನಕ್ಕೆ ಬಂದಿದ್ದ ಮೈಕಲ್ ಒಯಾರ್‌ಜಬಲ್ 86ನೇ ನಿಮಿಷದಲ್ಲಿ ಬಾರಿಸಿದ ಗೋಲು ಸ್ಪೇನ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿತು.
4 ಬಾರಿ ಟ್ರೋಫಿ ಗೆದ್ದ ಮೊದಲ ತಂಡ ಸ್ಪೇನ್
ಸ್ಪೇನ್ ಟೂರ್ನಿಯಲ್ಲಿ 4 ಬಾರಿ ಆದ ಮೊದಲ ತಂಡ. ಜರ್ಮನಿ 3 ಬಾರಿ ಗೆದ್ದಿದ್ದು, ಆ ದಾಖಲೆಯನ್ನು ಸ್ಪೇನ್ ಮುರಿಯಿತು. 1964ರಲ್ಲಿ ಮೊದಲ ಬಾರಿ ಟ್ರೋಫಿ ಗೆದ್ದಿದ್ದ ಸ್ಪೇನ್ ಬಳಿಕ 2008, 2012ರಲ್ಲೂ ಚಾಂಪಿಯನ್ ಆಗಿತ್ತು. 1984ರಲ್ಲಿ ತಂಡ ರನ್ನರ್-ಅಪ್ ಸ್ಥಾನ ಪಡೆದಿತ್ತು.
ಸತತ 2ನೇ ಬಾರಿ ಫೈನಲ್‌ನಲ್ಲಿ ಸೋಲು
ಇಂಗ್ಲೆಂಡ್ 1966ರಲ್ಲಿ ಫಿಫಾ ವಿಶ್ವಕಪ್ ಗೆದ್ದ ಬಳಿಕ ಯಾವುದೇ ಮಹತ್ವದ ಟೂರ್ನಿಗಳಲ್ಲಿ ಗೆದ್ದಿಲ್ಲ. ಯುರೋ ಕಪ್‌ನಲ್ಲಿ ತಂಡ ಸತತ 2ನೇ ಬಾರಿ ಫೈನಲ್‌ನಲ್ಲಿ ಎಡವಿ ಟ್ರೋಫಿ ತಪ್ಪಿಸಿಕೊಂಡಿತು. 2020ರ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಇಟಲಿ ವಿರುದ್ಧ ಪರಾಭವಗೊಂಡಿತ್ತು.