ರಾಂಚಿಯಲ್ಲಿ ಶುಕ್ರವಾರದಿಂದ ಆರಂಭಗೊಳ್ಳ ಲಿರುವ 4ನೇ ಪಂದ್ಯಕ್ಕೆ ಸಿದ್ಧಗೊಂಡಿರುವ ಪಿಚ್‌ ಸ್ಪಿನ್ ಸ್ನೇಹಿ ಪಿಚ್‌ ಆಗಿರುವ ಸಾಧ್ಯತೆ ಇದ್ದು, ಈಗಾಗಲೇ ಎರಡೂ ತಂಡಗಳು ಅಗತ್ಯ ಸಿದ್ಧತೆಗಳನ್ನು ಆರಂಭಿಸಿವೆ.

ರಾಂಚಿ: ಭಾರೀ ರೋಚಕತೆಯಿಂದ ಸಾಗುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿಯಲ್ಲಿ ಇದುವರೆಗೂ ಮೂರು ಪಂದ್ಯಗಳು ನಡೆದಿದ್ದು, ಯಾವ ಪಂದ್ಯದಲ್ಲೂ ಪಿಚ್‌ ಸಂಪೂರ್ಣವಾಗಿ ಸ್ಪಿನ್ನರ್‌ಗಳಿಗೆ ನೆರವಾಗಲಿಲ್ಲ. 

ಆದರೆ, ರಾಂಚಿಯಲ್ಲಿ ಶುಕ್ರವಾರದಿಂದ ಆರಂಭಗೊಳ್ಳಲಿರುವ 4ನೇ ಪಂದ್ಯಕ್ಕೆ ಸಿದ್ಧಗೊಂಡಿರುವ ಪಿಚ್‌ ಸ್ಪಿನ್ ಸ್ನೇಹಿ ಪಿಚ್‌ ಆಗಿರುವ ಸಾಧ್ಯತೆ ಇದ್ದು, ಈಗಾಗಲೇ ಎರಡೂ ತಂಡಗಳು ಅಗತ್ಯ ಸಿದ್ಧತೆಗಳನ್ನು ಆರಂಭಿಸಿವೆ.

ಸಂಪೂರ್ಣವಾಗಿ ಸ್ಪಿನ್‌ ಸ್ನೇಹಿ ಪಿಚ್‌ನತ್ತ ಭಾರತ ಒಲವು ತೋರಲು ಕಾರಣವೂ ಇದೆ. ನಿರಂತರವಾಗಿ ಕ್ರಿಕೆಟ್‌ ಆಡುತ್ತಿದ್ದ ಕಾರಣ ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾಗೆ 4ನೇ ಟೆಸ್ಟ್‌ನಿಂದ ವಿಶ್ರಾಂತಿ ನೀಡಲಾಗಿದೆ. 

ಬೂಮ್ರಾ ಈ ಸರಣಿಯಲ್ಲಿ ಒಟ್ಟು 17 ವಿಕೆಟ್‌ ಕಬಳಿಸಿ, ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 4ನೇ ಪಂದ್ಯದಲ್ಲಿ ಅವರ ಅನುಪಸ್ಥಿತಿ ಎದುರಾಗದಂತೆ ನೋಡಿಕೊಳ್ಳಲು ಭಾರತಕ್ಕಿರುವ ಉತ್ತಮ ಆಯ್ಕೆ ಎಂದರೆ ಸ್ಪಿನ್ ಪಿಚ್‌ನ ಮೊರೆ ಹೋಗುವುದು.

ಅಕ್ಷರ್‌ ಕೂಡ ಕಣಕ್ಕೆ?
ಭಾರತ ಈ ಸರಣಿಯ ಮೂರೂ ಪಂದ್ಯಗಳಲ್ಲಿ ತಲಾ ಮೂವರು ಸ್ಪಿನ್ನರ್‌ಗಳನ್ನು ಆಡಿಸಿದೆ. 4ನೇ ಟೆಸ್ಟ್‌ನಲ್ಲಿ ಒಬ್ಬ ಹೆಚ್ಚುವರಿ ಸ್ಪಿನ್ನರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಅಕ್ಷರ್‌ ಪಟೇಲ್‌ ಕೂಡ ಕಣಕ್ಕಿಳಿಯಬಹುದು. 

ಅಕ್ಷರ್‌ ಕೆಳ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್‌ ಬಲ ಸಹ ಹೆಚ್ಚಿಸಲಿದ್ದಾರೆ. ಒಂದು ವೇಳೆ ಭಾರತ ನಾಲ್ವರು ಸ್ಪಿನ್ನರ್‌ಗಳು ಆಡಿಸಿದರೆ, ಆಗ ವೇಗದ ಬೌಲಿಂಗ್‌ ಹೊಣೆ ಮೊಹಮದ್‌ ಸಿರಾಜ್‌ ಹೆಗಲಿದೆ ಬೀಳಲಿದೆ.

ಇಂಗ್ಲೆಂಡ್‌ಗೂ ಅನುಕೂಲ?:
ಸರಣಿಯ ಆರಂಭದಿಂದಲೂ ಇಂಗ್ಲೆಂಡ್‌ ತಾನು ಭಾರತದ ಸ್ಪಿನ್‌ ಸವಾಲಿಗೆ ಹೆದರುವುದಿಲ್ಲ ಎಂದು ಹೇಳುತ್ತಲೇ ಬಂದಿದೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತದ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿ ಗೆದ್ದಿದ್ದ ಇಂಗ್ಲೆಂಡ್‌, ನಂತರದ 2 ಪಂದ್ಯಗಳಲ್ಲಿ ಮಂಕಾಗಿದೆ.

ಇಂಗ್ಲೆಂಡ್‌ ಸಹ ಒಬ್ಬ ಹೆಚ್ಚುವರಿ ಸ್ಪಿನ್ನರ್‌ಗೆ ಅವಕಾಶ ನೀಡಿ, ತನ್ನ ವೇಗದ ಬೌಲಿಂಗ್‌ ಪಡೆಯಲ್ಲೂ ಬದಲಾವಣೆ ಮಾಡಬಹುದು. ಆ್ಯಂಡರ್‌ಸನ್‌, ಮಾರ್ಕ್‌ ವುಡ್‌ ಇಬ್ಬರನ್ನೂ ಹೊರಗಿಟ್ಟು, ವೇಗಿ ಓಲಿ ರಾಬಿನ್ಸನ್‌ರನ್ನು ಆಡಿಸಲಿದೆ ಎಂದು ಹೇಳಲಾಗುತ್ತಿದೆ. ಸ್ಪಿನ್ನರ್‌ ಶೋಯಬ್‌ ಬಶೀರ್‌ಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.

ಪಿಚ್‌ ಅಧ್ಯಯನ ನಡೆಸಿದಭಾರತ, ಇಂಗ್ಲೆಂಡ್‌!
ಬುಧವಾರ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಂತೆ ಇಂಗ್ಲೆಂಡ್‌ ಹಾಗೂ ಭಾರತ ತಂಡಗಳು ಪಿಚ್‌ ಅಧ್ಯಯನ ನಡೆಸಿದವು. ಮೊದಲು ಇಂಗ್ಲೆಂಡ್‌ ತಂಡದ ಕೋಚ್‌ ಬ್ರೆಂಡನ್‌ ಮೆಕ್ಕಲಂ, ಆಟಗಾರರಾದ ಜಾನಿ ಬೇರ್‌ಸ್ಟೋವ್, ಜೋ ರೂಟ್‌ ಹಾಗೂ ಓಲಿ ಪೋಪ್‌ ಎಲ್ಲಾ ಆಯಾಮಗಳಿಂದಲೂ ಪಿಚ್‌ ವೀಕ್ಷಣೆ ಮಾಡಿದರು. 

ಇಂಗ್ಲಿಷ್‌ ಪಡೆ ಪಿಚ್‌ ವೀಕ್ಷಣೆಯಲ್ಲಿ ತಲ್ಲೀನಗೊಂಡಿದ್ದನ್ನು ಕಂಡು ಮೈದಾನ ಸಿಬ್ಬಂದಿಗೇ ಅಚ್ಚರಿಯಾಯಿತು. ಬಳಿಕ ಭಾರತದ ಕೋಚ್‌ ರಾಹುಲ್‌ ದ್ರಾವಿಡ್‌ ಸಹ ಹಲವು ನಿಮಿಷಗಳ ಕಾಲ ಪಿಚ್‌ ವೀಕ್ಷಣೆಯಲ್ಲಿ ತೊಡಗಿದರು. 

ಪಿಚ್‌ನ ಪಕ್ಕದಲ್ಲೇ ನಡೆದು ಹೋದ ದ್ರಾವಿಡ್‌, ಥಟ್ಟನೆ ಒಂದೆಡೆ ನಿಂತು ಪಿಚ್‌ನ ಒಂದು ಭಾಗವನ್ನು ಬಹಳಷ್ಟು ಹೊತ್ತು ಸೂಕ್ಷ್ಮವಾಗಿ ಗಮನಿಸಿದರು. ಬಳಿಕ ಕ್ಯುರೇಟರ್‌ಗಳನ್ನು ಕರೆದು ಚರ್ಚಿಸಿದರು. 

ದ್ರಾವಿಡ್‌ ಹೊರನಡೆಯುತ್ತಿದ್ದಂತೆ ಕ್ಯುರೇಟರ್‌ ಮೈದಾನ ಸಿಬ್ಬಂದಿಗೆ ಪಿಚ್‌ಗೆ ಹೊದಿಕೆ ಹೊದಿಸುವಂತೆ ಸೂಚಿಸಿದ್ದು, ಎಲ್ಲರಲ್ಲೂ ಕುತೂಹಲ ಮೂಡಿಸಿತು.