ಸಾರಾಂಶ
ಗಾಲೆ(ಶ್ರೀಲಂಕಾ): ಶ್ರೀಲಂಕಾ ಅಂಡರ್-19 ತಂಡದ ಮಾಜಿ ನಾಯಕ ಧಾಮಿಕಾ ನಿರೋಶನಾ ಅವರನ್ನು ದುಷ್ಕರ್ಮಿಗಳು ಬುಧವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ. 41 ವರ್ಷದ ಧಾಮಿಕಾ ಮಂಗಳವಾರ ರಾತ್ರಿ ಗಾಲೆ ಜಿಲ್ಲೆಯ ಅಂಬಾಲಗೊಂಡ ಎಂಬಲ್ಲಿ ತಮ್ಮ ಮನೆಯ ಹೊರಗೆ ನಿಂತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಗುಂಡಿಕ್ಕಿದ್ದಾನೆ.
ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಧಾಮಿಕಾ 2000ರಲ್ಲಿ ಲಂಕಾ ಅಂಡರ್-19 ತಂಡಕ್ಕೆ ಪಾದಾರ್ಪಣೆ ಮಾಡಿದ್ದು, 2002ರ ಅಂಡರ್-19 ವಿಶ್ವಕಪ್‌ನಲ್ಲಿ ತಂಡದ ನಾಯಕತ್ವವನ್ನೂ ವಹಿಸಿದ್ದರು. ಅವರು 12 ಪ್ರಥಮ ದರ್ಜೆ, 8 ಲಿಸ್ಟ್ ‘ಎ’ ಪಂದ್ಯಗಳನ್ನಾಡಿದ್ದಾರೆ. 2004ರಲ್ಲಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ಇಂಗ್ಲೆಂಡ್ vs ವಿಂಡೀಸ್ 2ನೇ ಟೆಸ್ಟ್ ಇಂದಿನಿಂದ
ನಾಟಿಂಗ್‌ಹ್ಯಾಮ್: ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯ ಗುರುವಾರದಿಂದ ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. 3 ಪಂದ್ಯಗಳ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ 1-0 ಮುನ್ನಡೆಯಲ್ಲಿದ್ದು, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ. ಪಂದ್ಯಕ್ಕೆ ಇಂಗ್ಲೆಂಡ್ ಈಗಾಗಲೇ ಆಡುವ 11ರ ಬಳಗವನ್ನು ಪ್ರಕಟಿಸಿದೆ. ಆರಂಭಿಕ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಜೇಮ್ಸ್ ಆ್ಯಂಡರ್‌ಸನ್ ನಿವೃತ್ತಿ ಘೋಷಿಸಿದ್ದರಿಂದ 2ನೇ ಪಂದ್ಯದಲ್ಲಿ ಅವರ ಬದಲು ಮಾರ್ಕ್ ವುಡ್ ಕಣಕ್ಕಿಳಿಯಲಿದ್ದಾರೆ. ಅತ್ತ ವಿಂಡೀಸ್ ಮೊದಲ ಪಂದ್ಯದ ಹೀನಾಯ ಸೋಲಿನ ಆಘಾತದಿಂದ ಹೊರಬಂದು ಸರಣಿ ಸಮಬಲಗೊಳಿಸುವ ಕಾತರದಲ್ಲಿದೆ.