ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಭಾರತದ ದಂತಕತೆ ಸುನಿಲ್‌ ಚೆಟ್ರಿ ಗುಡ್‌ಬೈ

| Published : May 17 2024, 12:32 AM IST / Updated: May 17 2024, 05:00 AM IST

ಸಾರಾಂಶ

ಜೂ.6ರಂದು ಕೋಲ್ಕತಾದಲ್ಲಿ ಕುವೈತ್‌ ವಿರುದ್ಧ ಕೊನೆಯ ಪಂದ್ಯ. ಭಾರತ ಪರ 150 ಪಂದ್ಯಗಳನ್ನಾಡಿರುವ 39 ವರ್ಷದ ಚೆಟ್ರಿ, 94 ಗೋಲುಗಳನ್ನು ಬಾರಿಸಿದ್ದಾರೆ.

ನವದೆಹಲಿ: ಭಾರತೀಯ ಫುಟ್ಬಾಲ್‌ನ ಐಕಾನ್‌, ದಿಗ್ಗಜ ಆಟಗಾರ, ನಾಯಕ ಸುನಿಲ್‌ ಚೆಟ್ರಿ ಗುರುವಾರ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ 9 ನಿಮಿಷಗಳ ವಿಡಿಯೋವನ್ನು ಪೋಸ್ಟ್‌ ಮಾಡುವ ಮೂಲಕ ಚೆಟ್ರಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

 ಜೂ.6ರಂದು ಕೋಲ್ಕತಾದ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಕುವೈತ್‌ ವಿರುದ್ಧ ನಡೆಯಲಿರುವ ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯ ಪಂದ್ಯ, ಚೆಟ್ರಿ ಆಡಲಿರುವ ಕೊನೆಯ ಅಂ.ರಾ. ಪಂದ್ಯವಾಗಲಿದೆ.

 2005ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಚೆಟ್ರಿ, 19 ವರ್ಷಗಳ ಕಾಲ ದೇಶವನ್ನು ಪ್ರತಿನಿಧಿಸಿದ್ದಾರೆ. ಭಾರತ ಪರ 150 ಪಂದ್ಯಗಳನ್ನಾಡಿರುವ 39 ವರ್ಷದ ಚೆಟ್ರಿ, 94 ಗೋಲುಗಳನ್ನು ಬಾರಿಸಿದ್ದಾರೆ. ಭಾರತ ಪರ ಅತಿಹೆಚ್ಚು ಪಂದ್ಯಗಳನ್ನಾಡಿದ, ಅತಿಹೆಚ್ಚು ಗೋಲುಗಳನ್ನು ಬಾರಿಸಿದ ದಾಖಲೆ ಅವರ ಹೆಸರಲ್ಲೇ ಇದೆ. 

ಸಕ್ರಿಯ ಫುಟ್ಬಾಲಿಗರ ಪೈಕಿ ಚೆಟ್ರಿ 3ನೇ ಸ್ಥಾನದಲ್ಲಿದ್ದು, ಕೇವಲ ದಿಗ್ಗಜರಾದ ಪೋರ್ಚುಗಲ್‌ನ ಕ್ರಿಸ್ಟಿಯಾಯೋ ರೊನಾಲ್ಡೋ ಹಾಗೂ ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ, ಚೆಟ್ರಿಗಿಂತ ಹೆಚ್ಚು ಗೋಲು ಗಳಿಸಿದ್ದಾರೆ. 

ಇನ್ನು ಅಂ.ರಾ. ಫುಟ್ಬಾಲ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಚೆಟ್ರಿ 4ನೇ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್‌ ಫೆಡರೇಶನ್‌ (ಫಿಫಾ), ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌ (ಎಐಎಫ್‌ಎಫ್‌), ದೇಶ, ವಿದೇಶಗಳ ಫುಟ್ಬಾಲಿಗರು, ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ಯುವರಾಜ್‌ ಸಿಂಗ್‌ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಚೆಟ್ರಿಗೆ ಶುಭ ಕೋರಿದ್ದು, ಅವರ ನಿವೃತ್ತಿಯಿಂದ ಭಾರತೀಯ ಫುಟ್ಬಾಲ್‌ಗೆ ಮಾತ್ರವಲ್ಲದೇ ಅಂ.ರಾ. ಫುಟ್ಬಾಲ್‌ಗೂ ತುಂಬಲಾರದ ನಷ್ಟವಾಗಲಿದೆ ಎಂದಿದ್ದಾರೆ.