ಸಾರಾಂಶ
ಉದ್ದ ಜಿಗಿತದಲ್ಲಿ ಮೈಸೂರು ವಿಭಾಗದ ಜಿ. ಪವಿತ್ರಾ ಚಿನ್ನ ಸಂಪಾದಿಸಿದರು. ಆರ್. ಪ್ರಿಯಾಂಕ ಬೆಳ್ಳಿಗೆದ್ದು ದ್ವಿತೀಯ ಸ್ಥಾನಕ್ಕೆ ದೂಡಲ್ಪಟ್ಟರು. ಮೈಸೂರು ವಿಭಾಗವು ಒಟ್ಟು 8 ಚಿನ್ನ, 10 ಬೆಳ್ಳಿ, 8 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು.
ಮಹೇಂದ್ರ ದೇವನೂರು
ಮೈಸೂರು : ದಸರಾ ಅಂಗವಾಗಿ ನಡೆಯುತ್ತಿರುವ ರಾಜ್ಯಮಟ್ಟದ ಸಿಎಂ ಕಪ್ ಕ್ರೀಡಾಕೂಟದಲ್ಲಿ ಮೈಸೂರಿನ ಪ್ರತಿಭೆ ಜಿ. ಪವಿತ್ರಾ ಉದ್ದ ಜಿಗಿತದಲ್ಲಿ ಕೂಟ ದಾಖಲೆ ನಿರ್ಮಿಸಿದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟದ ಎರಡನೇ ದಿನವಾದ ಶನಿವಾರ ಮೈಸೂರು ವಿಭಾಗದ ಕ್ರೀಡಾಪಟುಗಳು ಪ್ರಾಬಲ್ಯ ಮೆರೆದರು.
ಉದ್ದ ಜಿಗಿತದಲ್ಲಿ ಮೈಸೂರು ವಿಭಾಗದ ಜಿ. ಪವಿತ್ರಾ ಚಿನ್ನ ಸಂಪಾದಿಸಿದರು. ಆರ್. ಪ್ರಿಯಾಂಕ ಬೆಳ್ಳಿಗೆದ್ದು ದ್ವಿತೀಯ ಸ್ಥಾನಕ್ಕೆ ದೂಡಲ್ಪಟ್ಟರು. ಮೈಸೂರು ವಿಭಾಗವು ಒಟ್ಟು 8 ಚಿನ್ನ, 10 ಬೆಳ್ಳಿ, 8 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು.
ಬೆಂಗಳೂರು ನಗರ ವಿಭಾಗವು 6 ಚಿನ್ನ, 5 ಬೆಳ್ಳಿ, 4 ಚಿನ್ನದ ಪದಕಗಳಿಸಿ ದ್ವಿತೀಯ ಸ್ಥಾನ ಪಡೆಯಿತು. ಬೆಳಗಾವಿ ವಿಭಾಗವು 4 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕ ಬೇಟೆಯಾಡಿ ತೃತೀಯ ಸ್ಥಾನ ಗಳಿಸಿತು.
ಅಥ್ಲೆಟಿಕ್ಸ್ನಲ್ಲಿ ಬೆಂಗಳೂರು ನಗರ ವಿಭಾಗದ ತುಷಾರ್ ಭೇಕನೆ ಹಾಗೂ ಬೆಳಗಾವಿ ವಿಭಾಗದ ಶಿಲ್ಪಾ ಹೊಸಮನಿ ಅವರು ಇಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟದ ಅಥ್ಲೆಟಿಕ್ಸ್ ನ 800 ಮೀ. ಓಟದಲ್ಲಿ ಮೊದಲ ಸ್ಥಾನ ಪಡೆದರು. ಪುರುಷರ ವಿಭಾಗದ ಸ್ಪರ್ಧೆಯಲ್ಲಿ ತುಷಾರ್ ಭೇಕನೆ ಚಿನ್ನ, ಬೆಂಗಳೂರು ಗ್ರಾಮಾಂತರ ವಿಭಾಗದ ಎಂ.ಎಸ್. ಆಶ್ರಿತ್ ಬೆಳ್ಳಿ ಹಾಗೂ ಬೆಂಗಳೂರು ನಗರ ವಿಭಾಗದ ಜೆ.ಆರ್. ಕಲ್ಯಾಣ್ ಕಂಚು ಪಡೆದರು.
ಮಹಿಳಾ ವಿಭಾಗದಲ್ಲಿ ಶಿಲ್ಪಾ ಹೊಸಮನಿ ಚಿನ್ನ, ಮೈಸೂರು ವಿಭಾಗದ ಪ್ರತಿಕ್ಷಾ ಬೆಳ್ಳಿ, ರೇಖಾ ಬಸಪ್ಪ ಪಿರೋಜಿ ಕಂಚು ಪಡೆದರು.
ಗುಂಡು ಎಸೆತ ಮತ್ತು ಡಿಸ್ಕಸ್ ಥ್ರೋನಲ್ಲಿ ಮೈಸೂರು ವಿಭಾಗದ ಮೊಹಮ್ಮದ್ ಸಕ್ಲೈನ್ ಅಹ್ಮದ್ ಚಿನ್ನದ ಪದಕ ಪಡೆದರು. ಟ್ರಿಪಲ್ ಜಂಪ್ ಮೈಸೂರು ವಿಭಾಗದ ಜಿ. ಪವಿತ್ರ ಚಿನ್ನ, ಗುಂಡು ಎಸೆತದಲ್ಲಿ ಮೈಸೂರು ವಿಭಾಗದ ವಿ. ಅಂಬಿಕಾ ಚಿನ್ನ, ಡಿಸ್ಕಸ್ ಥ್ರೋನಲ್ಲಿ ಎಂ.ಎನ್. ಸುಷ್ಮಾ ಚಿನ್ನ, 100 ಮೀ. ಹರ್ಡಲ್ಸ್ ನಲ್ಲಿ ಮೈಸೂರು ವಿಭಾಗದ ಚಂದ್ರಿಕಾ ಚಿನ್ನ, 4x400 ಮೀ. ರಿಲೇಯಲ್ಲಿ ಮೈಸೂರು ವಿಭಾಗ ಚಿನ್ನದ ಪದಕಗಳಿಸಿತು.