ಹೊರಗಿನ ಗದ್ದಲ, ಟೀಕೆಗೆ ಕಿವಿಗೊಡಬೇಡಿ : ಕೋಚ್‌ ಗೌತಮ್‌ ಗಂಭೀರ್‌ಗೆ ರವಿ ಶಾಸ್ತ್ರಿ ಸಲಹೆ

| Published : Nov 22 2024, 01:18 AM IST / Updated: Nov 22 2024, 04:24 AM IST

ಸಾರಾಂಶ

ರಾಹುಲ್‌ ಯಾವುದೇ ಕ್ರಮಾಂಕದಲ್ಲೂ ಆಡಲು ಸಾಮರ್ಥ್ಯವಿರುವ ಆಟಗಾರ. ಹೀಗಾಗಿ ತಂಡ ಅವರನ್ನೇ ಆರಂಭಿಕನಾಗಿ ಕಣಕ್ಕಿಳಿಸಬಹುದು ಎಂದು ಚೇತೇಶ್ವರ ಪೂಜಾರ ಹೇಳಿದ್ದಾರೆ.

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್‌ ಸರಣಿಗೂ ಮುನ್ನ ಭಾರತದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ಗೆ ಮಾಜಿ ಕೋಚ್‌ ರವಿ ಶಾಸ್ತ್ರಿ ಸಲಹೆ ನೀಡಿದ್ದು, ಹೊರಗಿನ ಗದ್ದಲ, ಟೀಕೆಗೆ ಕಿವಿಗೊಡಬೇಡಿ ಎಂದಿದ್ದಾರೆ. 

’ಸ್ಟಾರ್‌ಸ್ಪೋರ್ಟ್ಸ್‌ ಪ್ರೆಸ್‌ ರೂಂ’ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಶಾಸ್ತ್ರಿ, ‘ಗಂಭೀರ್‌ ಸರಣಿ ವೇಳೆ ಶಾಂತಚಿತ್ತವಾಗಿರಬೇಕು. ಹೊರಗಿನ ಗದ್ದಲ, ಟೀಕೆಗೆ ಕಿವಿಗೊಡಬಾರದು. ತಮ್ಮ ಆಟಗಾರರು, ತಂಡದ ಬಗ್ಗೆ ಗಮನಕೊಟ್ಟರೆ ಸಾಕು’ ಎಂದು ಸಲಹೆ ನೀಡಿದ್ದಾರೆ. ಶಾಸ್ತ್ರಿ ಅವರ ಜೊತೆ ಭಾರತೀಯ ಕ್ರಿಕೆಟಿಗ ಚೇತೇಶ್ವರ ಪೂಜಾರ ಕೂಡಾ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡರು.

 ‘ಕೆ.ಎಲ್‌.ರಾಹುಲ್‌ ಭಾರತ ಕಂಡ ಅತ್ಯಂತ ಪ್ರತಿಭಾವಂತ ಆಟಗಾರ. ಈ ಸರಣಿಯಲ್ಲಿ ಭಾರತ ಗೆಲ್ಲಬೇಕಿದ್ದರೆ ರಾಹುಲ್‌ ಪ್ರದರ್ಶನ ನಿರ್ಣಾಯಕ. ಅವರು 3ನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ. ರಾಹುಲ್‌ ಯಾವುದೇ ಕ್ರಮಾಂಕದಲ್ಲೂ ಆಡಲು ಸಾಮರ್ಥ್ಯವಿರುವ ಆಟಗಾರ. ಹೀಗಾಗಿ ತಂಡ ಅವರನ್ನೇ ಆರಂಭಿಕನಾಗಿ ಕಣಕ್ಕಿಳಿಸಬಹುದು’ ಎಂದು ಪೂಜಾರ ಹೇಳಿದ್ದಾರೆ.

ನಾಡಿದ್ದು ರೋಹಿತ್‌ ಶರ್ಮಾ ಆಸ್ಟ್ರೇಲಿಯಾಕ್ಕೆ ಪ್ರಯಾಣ

ಪರ್ತ್: ಭಾರತದ ಖಾಯಂ ನಾಯಕ ರೋಹಿತ್‌ ಶರ್ಮಾ ಭಾನುವಾರ ಆಸ್ಟ್ರೇಲಿಯಾದ ಪರ್ತ್‌ಗೆ ತೆರಳಲಿದ್ದಾರೆ. ತಮ್ಮ ಪತ್ನಿ 2ನೇ ಮಗುವಿಗೆ ಜನ್ಮ ನೀಡಿದ ಕಾರಣ ರೋಹಿತ್‌ ಭಾರತದಲ್ಲೇ ಉಳಿದಿದ್ದು, ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಭಾನುವಾರ ಪರ್ತ್‌ಗೆ ತೆರಳಿ ತಂಡ ಕೂಡಿಕೊಳ್ಳಲಿದ್ದು, 2ನೇ ಟೆಸ್ಟ್‌ಗೆ ಲಭ್ಯವಿರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.