ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ಇರುವಂತೆ ನಿಧಾನಗತಿ ಬೌಲಿಂಗ್‌ಗೆ ಕಡಿವಾಣ ಹಾಕಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ), ಟೆಸ್ಟ್‌ ಕ್ರಿಕೆಟ್‌ನಲ್ಲೂ ಓವರ್‌ಗಳ ಮಧ್ಯೆ 60 ಸೆಕೆಂಡ್‌ಗಳ ಸ್ಟಾಪ್‌ ಕ್ಲಾಕ್‌ ನಿಯಮ ಜಾರಿಗೆ ತಂದಿದೆ.

ದುಬೈ: ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ಇರುವಂತೆ ನಿಧಾನಗತಿ ಬೌಲಿಂಗ್‌ಗೆ ಕಡಿವಾಣ ಹಾಕಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ), ಟೆಸ್ಟ್‌ ಕ್ರಿಕೆಟ್‌ನಲ್ಲೂ ಓವರ್‌ಗಳ ಮಧ್ಯೆ 60 ಸೆಕೆಂಡ್‌ಗಳ ಸ್ಟಾಪ್‌ ಕ್ಲಾಕ್‌ ನಿಯಮ ಜಾರಿಗೆ ತಂದಿದೆ. ಕೆಲ ತಿಂಗಳುಗಳ ಹಿಂದೆಯೇ ಈ ನಿಯಮನ್ನು ಟೆಸ್ಟ್‌ನಲ್ಲೂ ಪರಿಚಯಿಸುವುದಾಗಿ ಐಸಿಸಿ ತಿಳಿಸಿತ್ತು. 

2025-2027ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಚರಣದಲ್ಲಿ ಈಗಾಗಲೇ ಸ್ಟಾಪ್ ಕ್ಲಾಕ್‌ ಅಳವಡಿಕೆ ಮಾಡಲಾಗಿದೆ ಎಂದು ಐಸಿಸಿ ಮಾಹಿತಿ ಹಂಚಿಕೊಂಡಿದೆ. ಹೊಸ ನಿಯಮದ ಪ್ರಕಾರ, ಬೌಲಿಂಗ್‌ ಮಾಡುವ ತಂಡಕ್ಕೆ ಒಂದು ಓವರ್ ಮುಗಿದ ಬಳಿಕ ಮತ್ತೊಂದು ಓವರ್‌ ಆರಂಭಿಸಲು 60 ಸೆಕೆಂಡ್‌ ಕಾಲಾವಕಾಶವಿರಲಿದೆ. ಓವರ್‌ ಮುಗಿಯುತ್ತಿದ್ದಂತೆ ಕ್ರೀಡಾಂಗಣದಲ್ಲಿರುವ ದೊಡ್ಡ ಪರದೆಯ ಮೇಲೆ ಬಾಕಿ ಇರುವ ಸಮಯವನ್ನು ಬಿತ್ತರಿಸಲಾಗುತ್ತಿರುತ್ತದೆ.

 ಒಂದು ವೇಳೆ 60 ಸಕೆಂಡ್‌ಗಳೊಳಗೆ ಹೊಸ ಓವರ್‌ ಆರಂಭಿಸದಿದ್ದರೆ ಬೌಲಿಂಗ್‌ ಮಾಡುತ್ತಿರುವ ತಂಡಕ್ಕೆ ಎಚ್ಚರಿ ನೀಡಲಾಗುತ್ತದೆ. 80 ಓವರ್‌ಗಳ ಅವಧಿಯಲ್ಲಿ 3 ಬಾರಿ ನಿಯಮ ಉಲ್ಲಂಘಿಸಿದರೆ, ಬ್ಯಾಟಿಂಗ್‌ ಮಾಡುತ್ತಿರುವ ತಂಡಕ್ಕೆ 5 ಪೆನಾಲ್ಟಿ ರನ್‌ ದೊರೆಯಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಇನ್ನಿಂಗ್ಸ್‌ನಲ್ಲಿ 80 ಓವರ್ ಪೂರ್ಣಗೊಂಡ ಬಳಿಕ ಹೊಸ ಚೆಂಡು ಪಡೆಯಲು ಹೇಗೆ ಅವಕಾಶವಿರುತ್ತದೆಯೋ, ಅದೇ ರೀತಿ ಓವರ್‌-ರೇಟ್‌ ನಿಯಮ ಉಲ್ಲಂಘನೆಯಾಗಿದ್ದರೆ, ಅದು ಮಾಫಿ ಆಗಲಿದೆ.