ಭಾರತ vs ಬಾಂಗ್ಲಾದೇಶ 2ನೇ ಟೆಸ್ಟ್‌ಗೆ ಬಿರುಗಾಳಿ ಭೀತಿ: ಕಾನ್ಪುರದಲ್ಲಿ ಭಾರಿ ಮಳೆ ನಿರೀಕ್ಷೆ

| Published : Sep 26 2024, 08:31 AM IST

Team India

ಸಾರಾಂಶ

ಇಲ್ಲಿನ ಗ್ರೀನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಸೆ.27ರಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟಿ20 ಪಂದ್ಯಕ್ಕೆ ಭಾರಿ ಬಿರುಗಾಳಿ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಕಾನ್ಪುರ: ಇಲ್ಲಿನ ಗ್ರೀನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಸೆ.27ರಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟಿ20 ಪಂದ್ಯಕ್ಕೆ ಭಾರಿ ಬಿರುಗಾಳಿ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದು ಪಂದ್ಯಕ್ಕೆ ಅಡ್ಡಿಪಡಿಸುವ ಭೀತಿಯಿದ್ದು, ಮೊದಲೆರಡು ದಿನಗಳ ಆಟ ಸಂಪೂರ್ಣವಾಗಿ ಮಳೆಗೆ ಆಹುತಿಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಾನ್ಪುರದಲ್ಲಿ ಬುಧವಾರದಿಂದ ಶನಿವಾರ ರಾತ್ರಿ ವರೆಗೂ ಭಾರಿ ಮಳೆಯಾಗಲಿದೆ. ಬಿರುಗಾಳಿ ಕೂಡಾ ಬೀಸುವ ಸಾಧ್ಯತೆಯಿದೆ. ಪಂದ್ಯದ ಮೊದಲ ದಿನವಾದ ಶುಕ್ರವಾರ(ಸೆ.27) ಶೇಕಡಾ 92ರಷ್ಟು, 2ನೇ ದಿನ ಶೇಕಡಾ 80ರಷ್ಟು ಮಳೆ ಸುರಿಯುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಇದರಿಂದಾಗಿ ಪಂದ್ಯಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಹೆಚ್ಚು.

ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆ(ಯುಪಿಸಿಎ)ಯು ಡೆಲ್ಲಿ ಕ್ರಿಕೆಟ್‌ ಸಂಸ್ಥೆಯಿಂದ ಹೆಚ್ಚುವರಿ ಹೊದಿಕೆಗಳನ್ನು ತರಿಸಿದೆ. ‘ಪಂದ್ಯದ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಆದರೆ ನಾವು ಯಾವುದೇ ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದೇವೆ. ಇಲ್ಲಿ ಒಳಚರಂಡಿ ವ್ಯವಸ್ಥೆ ಉತ್ತಮವಾಗಿದೆ. ಆದ್ದರಿಂದ ಪೂರ್ಣ ಟೆಸ್ಟ್ ಪಂದ್ಯ ನಡೆಯುವ ವಿಶ್ವಾಸವಿದೆ’ ಎಂದು ಯುಪಿಸಿಎ ಜಿಲ್ಲಾ ಕ್ರೀಡಾ ಅಧಿಕಾರಿ ಅಮಿತ್ ಪಾಲ್ ತಿಳಿಸಿದ್ದಾರೆ.

ಉತ್ತರ ಪ್ರದೇಶ ಸೇರಿದಂತೆ ಕೆಲ ಉತ್ತರ ಭಾರತದ ರಾಜ್ಯಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಇತ್ತೀಚೆಗಷ್ಟೇ ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್‌ ನಡುವೆ ಗ್ರೇಟರ್‌ ನೋಯ್ಡಾ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಪಂದ್ಯವನ್ನು ಮಳೆ ಬಲಿ ಪಡೆದಿತ್ತು. ಮೊದಲೆರಡು ದಿನ ಒದ್ದೆ ಮೈದಾನದಿಂದಾಗಿ ಆಟ ನಡೆದಿರಲಿಲ್ಲ. ಬಳಿಕ ಮೂರು ದಿನ ನಿರಂತರ ಮಳೆಯಾಗಿದ್ದರಿಂದ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು.

ಸ್ಟ್ಯಾಂಡ್‌ ಕುಸಿತ ಭೀತಿ: ಟಿಕೆಟ್‌ ಮಾರಾಟ ಕಡಿತ

ಕಾನ್ಪುರ ಕ್ರೀಡಾಂಗಣದ ಒಂದು ಕಡೆಯ ಸ್ಟಾಂಡ್‌ ಅಪಾಯಕಾರಿ ಸ್ಥಿತಿಯಲ್ಲಿದ್ದು, ಸೀಮಿತ ಸಂಖ್ಯೆಯ ಟಿಕೆಟ್‌ಗಳನ್ನು ಮಾತ್ರ ಮಾರಾಟಕ್ಕೆ ಇಡಲಾಗಿದೆ. ಸ್ಟಾಂಡ್‌ ಬಗ್ಗೆ ಸರ್ಕಾರದ ಅಧಿಕಾರಿಗಳೇ ಕಳವಳ ವ್ಯಕ್ತಪಡಿಸಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಎಚ್ಚರಿಕೆ ನೀಡಿದೆ. ಹೀಗಾಗಿ 4800 ಆಸನ ಸಾಮರ್ಥ್ಯದ ಸಿ ಸ್ಟಾಂಡ್‌ನ 1700 ಟಿಕೆಟ್‌ಗಳು ಮಾತ್ರ ಮಾರಾಟಕ್ಕೆ ಇಡಲಾಗಿದೆ ಎಂದು ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆ ತಿಳಿಸಿದೆ.