7ನೇ ಆವೃತ್ತಿಯ ಇಂಡಿಯನ್‌ ಓಪನ್‌ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಮೊದಲ ದಿನ ಕರ್ನಾಟಕಕ್ಕೆ 5 ಪದಕ ದೊರೆತಿದೆ. 

ಬೆಂಗಳೂರು : 7ನೇ ಆವೃತ್ತಿಯ ಇಂಡಿಯನ್‌ ಓಪನ್‌ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಮೊದಲ ದಿನ ಕರ್ನಾಟಕಕ್ಕೆ 5 ಪದಕ ದೊರೆತಿದೆ. ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಕೂಟದಲ್ಲಿ ರಾಜ್ಯದ ಕೇಶವಮೂರ್ತಿ ಕೊರಟೀಕೆರೆ ಪುರುಷರ ಟಿ11 ವಿಭಾಗದ 1500 ಮೀ. ಓಟದಲ್ಲಿ ಬೆಳ್ಳಿ, ಟಿ11 ಹಾಗೂ ಟಿ12 ವಿಭಾಗದ 400 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದರು.

ಮಹಿಳೆಯರ ಲಾಂಗ್‌ ಜಂಪ್‌ (ಟಿ20, ಟಿ37, ಟಿ44 ವಿಭಾಗ)ನಲ್ಲಿ ಹರ್ಷಿತಾ ತಾಟೆರ್‌ ಬೆಳ್ಳಿ, ಮಹಿಳೆಯರ ಎಫ್‌ 57 ವಿಭಾಗದ ಡಿಸ್ಕಸ್‌ ಎಸೆತದಲ್ಲಿ ಶಿಲ್ಪಾ ಬೆಳ್ಳಿ, ಮಹಿಳೆಯರ ಎಫ್‌ 33 ವಿಭಾಗದ ಶಾಟ್‌ಪುಟ್‌ನಲ್ಲಿ ಮೇಧಾ ಜಯಂತ್‌ ಬೆಳ್ಳಿ ಪದಕ ಗೆದ್ದರು.

ಇದೇ ವೇಳೆ, ನಿರೀಕ್ಷೆಯಂತೆಯೇ ಎರಡು ಬಾರಿ ಪ್ಯಾರಾಲಿಂಪಿಕ್‌ ಚಾಂಪಿಯನ್‌ ಸುಮಿತ್‌ ಅಂತಿಲ್‌ ಪುರುಷರ ಜಾವೆಲಿನ್‌ ಥ್ರೋ (ಎಫ್‌12, ಎಫ್‌64 ವಿಭಾಗ)ನಲ್ಲಿ ಚಿನ್ನ ಪದಕ ಗೆದ್ದರು. ಹರ್ಯಾಣದ ಸುಮಿತ್‌ 72.25 ಮೀ. ದೂರಕ್ಕೆ ಜಾವೆಲಿನ್‌ ಎಸೆದರು. 2ನೇ ಸ್ಥಾನ ಪಡೆದ ಹರ್ಯಾಣದ ಮನ್‌ಜೀತ್‌ ಎಸೆದಿದ್ದು 54.56 ಮೀ., ಸರ್ವಿಸಸ್‌ನ ಪ್ರದೀಪ್‌ 45.17 ಮೀ. ಎಸೆತದೊಂದಿಗೆ ಕಂಚು ಪಡೆದರು. ಈ ಕೂಟವು ಈ ವರ್ಷ ನವದೆಹಲಿಯಲ್ಲಿ ನಡೆಯಲಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಆಯ್ಕೆ ಟ್ರಯಲ್ಸ್‌ ಆಗಿದೆ.