ಮಳೆಯಿಂದ ಪಂದ್ಯ ರದ್ದು: ಅಧಿಕೃತವಾಗಿ ಪ್ಲೇ-ಆಫ್‌ಗೇರಿದ ಸನ್‌ರೈಸರ್ಸ್‌

| Published : May 17 2024, 12:31 AM IST / Updated: May 17 2024, 05:03 AM IST

ಮಳೆಯಿಂದ ಪಂದ್ಯ ರದ್ದು: ಅಧಿಕೃತವಾಗಿ ಪ್ಲೇ-ಆಫ್‌ಗೇರಿದ ಸನ್‌ರೈಸರ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಗುಜರಾತ್‌ ವಿರುದ್ಧದ ಪಂದ್ಯ ಟಾಸ್‌ ಕೂಡಾ ಕಾಣದೆ ರದ್ದುಗೊಂಡಿತು. ಹೀಗಾಗಿ ಇತ್ತಂಡಗಳು ತಲಾ 1 ಅಂಕ ಹಂಚಿಕೊಂಡವು. ಗುಜರಾತ್‌ನ ಕಳೆದ ಪಂದ್ಯವೂ ಮಳೆಗಾಹುತಿಯಾಗಿತ್ತು.

ಹೈದರಾಬಾದ್‌: ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಗುಜರಾತ್‌ ಟೈಟಾನ್ಸ್‌ ನಡುವಿನ ಪಂದ್ಯ ಭಾರಿ ಮಳೆಯಿಂದಾಗಿ ಟಾಸ್‌ ಕೂಡಾ ಕಾಣದೆ ರದ್ದುಗೊಂಡಿದೆ. ಇದರೊಂದಿಗೆ ಸನ್‌ರೈಸರ್ಸ್‌ 17ನೇ ಆವೃತ್ತಿ ಐಪಿಎಲ್‌ನಲ್ಲಿ ಅಧಿಕೃತವಾಗಿ ಪ್ಲೇ-ಆಫ್‌ ಪ್ರವೇಶಿಸಿದೆ.

ಗುರುವಾರ ಸಂಜೆಯಿಂದಲೇ ಸುರಿಯುತ್ತಿದ್ದ ಮಳೆ ರಾತ್ರಿ 10 ಗಂಟೆವರೆಗೂ ಬಿಡುವು ನೀಡದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರಿಂದ ಇತ್ತಂಡಕ್ಕೂ ತಲಾ 1 ಅಂಕ ಲಭಿಸಿದವು. 

ಸನ್‌ರೈಸರ್ಸ್‌ 13 ಪಂದ್ಯಗಳಲ್ಲಿ ಅಂಕ ಗಳಿಕೆಯನ್ನು 15ಕ್ಕೆ ಹೆಚ್ಚಿಸಿ, ಅಂಕಪಟ್ಟಿಯಲ್ಲಿ ಅಗ್ರ-4ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು. ಗುಜರಾತ್‌ 14 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಟೂರ್ನಿಗೆ ವಿದಾಯ ಹೇಳಿತು. ಗುಜರಾತ್‌ನ ಕಳೆದ ಪಂದ್ಯವೂ ಮಳೆಯಿಂದ ರದ್ದುಗೊಂಡಿತ್ತು.

ಸದ್ಯ ಸನ್‌ರೈಸರ್ಸ್‌ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೇರುವ ಅವಕಾಶವೂ ತಂಡಕ್ಕಿದೆ. ಪಂಜಾಬ್‌ ವಿರುದ್ಧದ ಕೊನೆ ಪಂದ್ಯದಲ್ಲಿ ಸನ್‌ರೈಸರ್ಸ್‌ ಗೆದ್ದು, ಅತ್ತ ಕೋಲ್ಕತಾ ವಿರುದ್ಧ ರಾಜಸ್ಥಾನ(16 ಅಂಕ) ಸೋತರೆ ಸನ್‌ರೈಸರ್ಸ್‌ 2ನೇ ಸ್ಥಾನಿಯಾಗಲಿದೆ. ರಾಜಸ್ಥಾನ ಗೆದ್ದರೆ ತಂಡ 2ನೇ ಸ್ಥಾನ ಪಡೆಯಲಿದೆ.

ಡೆಲ್ಲಿ ಔಟ್‌: 1 ಸ್ಥಾನಕ್ಕಾಗಿ ಆರ್‌ಸಿಬಿ vs ಚೆನ್ನೈ ಫೈಟ್‌

ಸನ್‌ರೈಸರ್ಸ್‌ ಪ್ಲೇ-ಆಫ್‌ ಸ್ಥಾನ ಖಚಿತಪಡಿಸಿಕೊಳ್ಳುವುದರೊಂದಿಗೆ ಅತ್ತ ಡೆಲ್ಲಿ ಕ್ಯಾಪಿಟಲ್ಸ್‌(14 ಅಂಕ) ಟೂರ್ನಿಯಿಂದ ಅಧಿಕೃತವಾಗಿ ಹೊರಬಿತ್ತು. ಸದ್ಯ ಕೋಲ್ಕತಾ, ರಾಜಸ್ಥಾನ ಹಾಗೂ ಹೈದ್ರಾಬಾದ್ ಪ್ಲೇ-ಆಫ್‌ಗೇರಿದ್ದು, ಮತ್ತೊಂದು ಸ್ಥಾನಕ್ಕಾಗಿ 14 ಅಂಕ ಹೊಂದಿರುವ ಚೆನ್ನೈ ಹಾಗೂ 12 ಅಂಕ ಸಂಪಾದಿಸಿರುವ ಆರ್‌ಸಿಬಿ ಪೈಪೋಟಿ ನಡೆಸಲಿದೆ. ಇತ್ತಂಡಗಳ ನಡುವಿನ ಶನಿವಾರದ ಪಂದ್ಯ ವರ್ಚುವಲ್‌ ನಾಕೌಟ್‌ ಎನಿಸಿಕೊಳ್ಳಲಿದೆ.

07ನೇ ಬಾರಿ: ಸನ್‌ರೈಸರ್ಸ್‌ ಐಪಿಎಲ್‌ ಪ್ಲೇ-ಆಫ್‌ಗೇರಿದ್ದು ಇದು 7ನೇ ಬಾರಿ. 2016ರಲ್ಲಿ ತಂಡ ಚಾಂಪಿಯನ್‌ ಆಗಿದೆ.