ಐಪಿಎಲ್‌: ಪವರ್‌ನಲ್ಲಿ 125 ರನ್‌ ಚಚ್ಚಿ ಸನ್‌ರೈಸರ್ಸ್‌ ವಿಶ್ವ ದಾಖಲೆ!

| Published : Apr 21 2024, 02:19 AM IST / Updated: Apr 21 2024, 04:14 AM IST

ಸಾರಾಂಶ

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸನ್‌ರೈಸರ್ಸ್‌ ದಾಖಲೆಗಳ ಸುರಿಮಳೆ. 5 ಓವರಲ್ಲಿ 100, ಪವರ್‌-ಪ್ಲೇನಲ್ಲಿ ಒಟ್ಟು 125 ರನ್‌. ಐಪಿಎಲ್‌ ಪವರ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ದಾಖಲೆ ಬರೆದ ಸನ್‌ರೈಸರ್ಸ್‌. 

ನವದೆಹಲಿ: ಸನ್‌ರೈಸರ್ಸ್‌ ವಿರುದ್ಧ ಪಂದ್ಯ ಅಂದರೆ ಎದುರಾಳಿಗಳಿಗೆ ಹಿಂದಿನ ದಿನ ರಾತ್ರಿಯೇ ಜ್ವರ ಬರುವಂತಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಶನಿವಾರ ಸನ್‌ರೈಸರ್ಸ್‌ ಮತ್ತಷ್ಟು ದಾಖಲೆಗಳನ್ನು ಪುಡಿ ಪುಡಿ ಮಾಡಿತು.

ಡೆಲ್ಲಿಗೆ ‘ಹೆಡ್ಡೇಟು’: ಸನ್‌ರೈಸರ್ಸ್‌ನ ಆರಂಭಿಕರಾದ ಟ್ರ್ಯಾವಿಸ್‌ ಹೆಡ್‌ ಹಾಗೂ ಅಭಿಷೇಕ್‌ ಶರ್ಮಾ ಹೊಡಿಬಡಿ ಆಟದ ಮೂಲಕ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಯಾಕಪ್ಪಾ ತಗೊಂಡ್ವಿ ಎಂದು ಡೆಲ್ಲಿ ಪೇಚಾಡುವಂತೆ ಮಾಡಿದರು.

ಮೊದಲ ಓವರಲ್ಲೇ 19 ರನ್‌ ದೋಚಿದ ಸನ್‌ರೈಸರ್ಸ್‌, ಕೇವಲ 2.4 ಓವರ್‌ (16 ಎಸೆತ)ನಲ್ಲಿ 50 ರನ್‌ ತಲುಪಿತು. 5 ಓವರಲ್ಲಿ 100 ರನ್‌ ಗಳಿಸಿ, ಐಪಿಎಲ್‌ನಲ್ಲಿ ಅತಿವೇಗವಾಗಿ 100 ರನ್‌ ಗಳಿಸಿದ ತಂಡ ಎನ್ನುವ ಹಿರಿಮೆಗೆ ಪಾತ್ರವಾದ ಸನ್‌ರೈಸರ್ಸ್‌, ಪವರ್‌-ಪ್ಲೇ (ಮೊದಲ 6 ಓವರ್‌)ನಲ್ಲಿ 125 ರನ್‌ ಚಚ್ಚಿ, ಐಪಿಎಲ್‌ನಲ್ಲಿ ಮೊದಲ 6 ಓವರಲ್ಲಿ ಅತಿಹೆಚ್ಚು ರನ್‌ ಕಲೆಹಾಕಿದ ದಾಖಲೆಯನ್ನೂ ತನ್ನ ಹೆಸರಿಗೆ ಬರೆದುಕೊಂಡಿತು.

ಅಭಿಷೇಕ್‌ 12 ಎಸೆತದಲ್ಲಿ 46 ರನ್‌ ಗಳಿಸಿ ಔಟಾಗುವ ಮೂಲಕ, ತಮ್ಮ ಗುರು ಯುವರಾಜ್‌ ಸಿಂಗ್‌ರ 12 ಎಸೆತದಲ್ಲಿ ಅರ್ಧಶತಕದ ದಾಖಲೆ ಸರಿಗಟ್ಟುವ ಅವಕಾಶ ಕಳೆದುಕೊಂಡರು.

ಕ್ರಿಸ್‌ ಗೇಲ್‌ರ 30 ಎಸೆತಗಳಲ್ಲಿ ಶತಕದ ದಾಖಲೆಯನ್ನು ಮುರಿಯುವ ನಿರೀಕ್ಷೆ ಹುಟ್ಟಿಸಿದ್ದ ಹೆಡ್‌ 32 ಎಸೆತದಲ್ಲಿ 89 ರನ್‌ಗೆ ಔಟಾಗದರು. ಹೆಡ್‌ 16 ಎಸೆತದಲ್ಲಿ ಅರ್ಧಶತಕ ಪೂರೈಸಿದ್ದರು. ಶಾಬಾಜ್‌ ಅಹ್ಮದ್‌ 29 ಎಸೆತದಲ್ಲಿ 59 ರನ್‌ ಸಿಡಿಸಿ, ಸನ್‌ರೈಸರ್ಸ್‌ 260 ರನ್‌ ತಲುಪಲು ನೆರವಾದರು. ಮೊದಲ ತಂಡ: ಕಳೆದ ತಿಂಗಳು 27ರಂದು ಮುಂಬೈ ವಿರುದ್ಧ 277 ರನ್‌ ಸಿಡಿಸಿ, 10 ವರ್ಷಗಳಿಂದ ಭದ್ರವಾಗಿದ್ದ ಆರ್‌ಸಿಬಿಯ 263 ರನ್‌ ದಾಖಲೆಯನ್ನು ಮುರಿದಿದ್ದ ಸನ್‌ರೈಸರ್ಸ್‌, ವಾರದ ಹಿಂದಷ್ಟೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 287 ರನ್‌ ಚಚ್ಚಿ ಐಪಿಎಲ್‌ ಇತಿಹಾಸದಲ್ಲೇ ಅತಿದೊಡ್ಡ ಮೊತ್ತದ ದಾಖಲೆ ಬರೆದಿತ್ತು.

ಶನಿವಾರ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ, ಡೆಲ್ಲಿ ವಿರುದ್ಧ 266 ರನ್‌ ಸಿಡಿಸಿ ಐಪಿಎಲ್‌ನಲ್ಲಿ 3 ಬಾರಿ 260ಕ್ಕಿಂತ ಹೆಚ್ಚು ಮೊತ್ತ ದಾಖಲಿಸಿದ ಮೊದಲ ತಂಡ ಎನ್ನುವ ಹಿರಿಮೆಗೆ ಪಾತ್ರವಾಯಿತು.

ಐಪಿಎಲ್‌ ಪವರ್‌-ಪ್ಲೇನಲ್ಲಿ ಅತಿಹೆಚ್ಚು ರನ್‌

---

ತಂಡಸ್ಕೋರ್‌ವಿರುದ್ಧವರ್ಷ

ಸನ್‌ರೈಸರ್ಸ್‌125/0ಡೆಲ್ಲಿ2024

ಕೆಕೆಆರ್‌105/0ಆರ್‌ಸಿಬಿ2017

ಚೆನ್ನೈ100/2ಪಂಜಾಬ್‌2014

 03ನೇ ಬಾರಿ

ಈ ಐಪಿಎಲ್‌ನಲ್ಲಿ ಟ್ರ್ಯಾವಿಸ್‌ ಹೆಡ್‌ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವುದು ಇದು 3ನೇ ಬಾರಿ.

22 ಸಿಕ್ಸರ್‌

ಸನ್‌ರೈಸರ್ಸ್‌ ಇನ್ನಿಂಗ್ಸಲ್ಲಿ ಒಟ್ಟು 22 ಸಿಕ್ಸರ್‌ಗಳಿದ್ದವು. ಆರ್‌ಸಿಬಿ ವಿರುದ್ಧವೂ 22 ಸಿಕ್ಸರ್‌ ಚಚ್ಚಿ, ಐಪಿಎಲ್‌ ಇನ್ನಿಂಗ್ಸಲ್ಲಿ ಅತಿಹೆಚ್ಚು ಸಿಕ್ಸರ್‌ ದಾಖಲೆ ಬರೆದಿತ್ತು.

125 ರನ್‌

ಸನ್‌ರೈಸರ್ಸ್‌ ಗಳಿಸಿದ 125 ರನ್‌, ಐಪಿಎಲ್‌ನಲ್ಲಿ ಮಾತ್ರವಲ್ಲ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲೇ ಪವರ್‌-ಪ್ಲೇನಲ್ಲಿ ದಾಖಲಾದ ಅತಿಹೆಚ್ಚು ಮೊತ್ತ ಎನ್ನುವ ದಾಖಲೆ ಪಡೆದಿದೆ.