ಬ್ಯೂನಸ್ ಐರಿಸ್(ಅರ್ಜೆಂಟೀನಾ): ಮನೆಯಲ್ಲಿ ಕೂತು ಪಂದ್ಯ ವೀಕ್ಷಿಸಿದರೆ ಅರ್ಜೆಂಟೀನಾ ಗೆಲ್ಲುತ್ತೆ ಎಂಬ ಮೂಢನಂಬಿಕೆಯ ಕಾರಣದಿಂದಾಗಿ ಈ ಬಾರಿ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಲು ಅರ್ಜೆಂಟೀನಾ ಅಧ್ಯಕ್ಷ ಹಾವಿಯರ್ ಮಿಲೈ ನಿರಾಕರಿಸಿದ್ದಾರೆ.
ತಮ್ಮ ಆಪ್ತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೂಡಿ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ವೀಕ್ಷಿಸಲು ಹೋಗುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಿಲೈ, ‘ನಾನು ಕ್ರೀಡಾಂಗಣಕ್ಕೆ ಹೋಗಲ್ಲ. ಎಲ್ಲಾ 7 ಪಂದ್ಯಗಳನ್ನು ಮನೆಯಲ್ಲೇ ಕೂತು ವೀಕ್ಷಿಸಿದ್ದೇನೆ. ಚಳಿ ಇರುವುದರಿಂದ ಜಾಕೆಟ್ ಧರಿಸಿರುತ್ತೇನೆ. ಸ್ವಿಜರ್‌ಲೆಂಡ್ ವಿರುದ್ಧ ಪಂದ್ಯದಲ್ಲಿ ಜಾಕೆಟ್ ತೆಗೆದಾಗ ನಮ್ಮ ವಿರುದ್ಧ ಅವರು ಗೋಲು ಬಾರಿಸಿದ್ದರು. ಹಾಗಾಗಿ ನಾನು ಜಾಕೆಟ್ ಧರಿಸಿಯೇ ಇರುತ್ತೇನೆ’ ಎಂದಿದ್ದಾರೆ.
ಮೈದಾನಕ್ಕಿಲ್ಲ ಅಧ್ಯಕ್ಷರು:
ಅರ್ಜೆಂಟೀನಾದ ಅಧ್ಯಕ್ಷರು ಮಹತ್ವದ ಪಂದ್ಯಗಳಿಗೆ ಕ್ರೀಡಾಂಗಣಕ್ಕೆ ಬರುವುದನ್ನು ತಪ್ಪಿಸಿಕೊಳ್ಳುವುದು ಇದು ಮೊದಲೇನಲ್ಲ. 1990ರ ವಿಶ್ವಕಪ್‌ನಲ್ಲಿ ಕ್ಯಾಮರೂನ್ ವಿರುದ್ಧ ಅರ್ಜೆಂಟೀನಾ ಸೋತ ಪಂದ್ಯವನ್ನು ಆಗಿನ ಅಧ್ಯಕ್ಷ ಕಾರ್ಲೊಸ್ ಮೆನೆಮ್ ಕ್ರೀಡಾಂಗಣದಲ್ಲಿ ನೇರವಾಗಿ ವೀಕ್ಷಿಸಿದ್ದರು. ಆ ಬಳಿಕ ಯಾವುದೇ ಅಧ್ಯಕ್ಷರು ಮೈದಾನಕ್ಕೆ ಆಗಮಿಸಿಲ್ಲ.
ಮೂಢನಂಬಿಕೆ ಹೆಚ್ಚು:
ಲ್ಯಾಟಿನ್ ಅಮೆರಿಕದಲ್ಲಿ, ಅದರಲ್ಲೂ ಅರ್ಜೆಂಟೀನಾದಲ್ಲಿ ಮೂಢನಂಬಿಕೆ ಹೆಚ್ಚಾಗಿದೆ. ಕೆಲವರು ಪ್ರತಿ ಪಂದ್ಯಕ್ಕೂ ಒಂದೇ ಬಟ್ಟೆಯನ್ನು, ತೊಳೆಯದೆ ಧರಿಸುತ್ತಾರೆ. ಕೆಲವರು ಎಲ್ಲಾ ಪಂದ್ಯವನ್ನು ಒಂದೇ ಸ್ಥಳದಲ್ಲಿ ನಿಂತು ನೋಡುತ್ತಾರೆ. ಮೊದಲ ಪಂದ್ಯವನ್ನು ಬಸ್ ನಿಲ್ದಾಣ, ಬಾತ್‌ರೂಮ್, ಮನೆಯ ಹೊರಭಾಗದಲ್ಲಿ ವೀಕ್ಷಿಸಿದ್ದರೆ, ಉಳಿದೆಲ್ಲಾ ಪಂದ್ಯಗಳನ್ನು ಅಲ್ಲೇ ನಿಂತು ನೋಡುವ ಪರಿಪಾಟವಿದೆ.
