ಸಾರಾಂಶ
ಡೆಹ್ರಾಡೂನ್: 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಈಜುಪಟುಗಳು ಪದಕ ಬೇಟೆ ಮುಂದುವರಿದಿದೆ. ಕೂಟದ 3ನೇ ದಿನವಾದ ಶುಕ್ರವಾರ, ಈಜಿನಲ್ಲಿ ರಾಜ್ಯಕ್ಕೆ ಮತ್ತೆ 5 ಪದಕಗಳು ಸಿಕ್ಕವು. ಕರ್ನಾಟಕ ಒಟ್ಟಾರೆ 9 ಚಿನ್ನ ಸೇರಿ 17 ಪದಕ ಗೆದ್ದಿದ್ದು, ಈ ಪೈಕಿ 15 ಪದಕಗಳು ಈಜಿನಲ್ಲೇ ಸಿಕ್ಕಿವೆ.
ಮಹಿಳೆಯರ 50 ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ಧಿನಿಧಿ ದೇಸಿಂಘು 26.96 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರು. ಕೂಟದಲ್ಲಿ ಇದು ಅವರ 4ನೇ ಚಿನ್ನ. 1 ಕಂಚಿನ ಪದಕವನ್ನೂ ಧಿನಿಧಿ ಜಯಿಸಿದ್ದಾರೆ. ಇದೇ ವಿಭಾಗದಲ್ಲಿ ನೀನಾ ವೆಂಕಟೇಶ್‌ಗೆ ಕಂಚಿನ ಪದಕ ದೊರೆಯಿತು.
ಪುರುಷರ 400 ಮೀ. ಮೆಡ್ಲೆ ವಿಭಾಗದಲ್ಲಿ ರಾಜ್ಯದ ಶೋನ್ ಗಂಗೂಲಿ ಚಿನ್ನ ಜಯಿಸಿದರು. ಪುರುಷರ 50 ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ಶ್ರೀಹರಿ ನಟರಾಜ್ ಬೆಳ್ಳಿ ಜಯಿಸಿದರೆ, ಮಹಿಳೆಯರ 800 ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ಶ್ರೀಚರಣಿ ಕಂಚಿನ ಪದಕ ಪಡೆದರು.
ಕರ್ನಾಟಕ ಈ ವರೆಗೂ 9 ಚಿನ್ನ, ತಲಾ 4 ಬೆಳ್ಳಿ ಹಾಗೂ ಕಂಚಿನೊಂದಿಗೆ ಒಟ್ಟು 17 ಪದಕ ಪಡೆದು ಪದಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 9 ಚಿನ್ನ ಸೇರಿ 19 ಪದಕ ಗೆದ್ದಿರುವ ಮಣಿಪುರ, 9 ಚಿನ್ನ ಸೇರಿ 18 ಪದಕ ಗೆದ್ದಿರುವ ಸರ್ವಿಸಸ್ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.