ಟಿ20 ವಿಶ್ವಕಪ್‌: ಐಪಿಎಲ್‌ ಹೀರೋಸ್‌ಗೆ ಚಾನ್ಸ್‌ ಕೊಡದ ಬಿಸಿಸಿಐ!

| Published : May 01 2024, 01:23 AM IST

ಟಿ20 ವಿಶ್ವಕಪ್‌: ಐಪಿಎಲ್‌ ಹೀರೋಸ್‌ಗೆ ಚಾನ್ಸ್‌ ಕೊಡದ ಬಿಸಿಸಿಐ!
Share this Article
  • FB
  • TW
  • Linkdin
  • Email

ಸಾರಾಂಶ

ಟಿ20 ವಿಶ್ವಕಪ್‌ ತಂಡದಲ್ಲಿ ಹೊಸ ಮುಖಗಳಿಗೆ ಸಿಗದ ಅವಕಾಶ. ಅನಗತ್ಯ ಪ್ರಯೋಗ ಬೇಡ ಎಂದು ನಿರ್ಧಾರ ಮಾಡಿದ ಬಿಸಿಸಿಐ. ಅವಕಾಶಕ್ಕಾಗಿ ಇನ್ನೂ ಕಾಯಬೇಕಿದೆ ಮಯಾಂಕ್‌ ಯಾದವ್‌, ರಿಯಾನ್‌ ಪರಾಗ್‌, ಶಶಾಂಕ್‌ ಸಿಂಗ್‌, ಅಶುತೋಷ್‌ ಶರ್ಮಾ. ರಿಂಕು ಸಿಂಗ್‌ರನ್ನು ತಂಡದಿಂದ ಕೈಬಿಟ್ಟಿದ್ದೇಕೆ?

ಅಹಮದಾಬಾದ್‌: ಯಜುವೇಂದ್ರ ಚಹಲ್‌ 2022ರ ಟಿ20 ವಿಶ್ವಕಪ್‌ ತಂಡದಲ್ಲಿ ಇದ್ದರೂ ಅವರನ್ನು ಒಂದೇ ಒಂದು ಪಂದ್ಯದಲ್ಲೂ ಆಡಿಸಿರಲಿಲ್ಲ. ಇತ್ತೀಚಿಗೆ ತವರಿನಲ್ಲಿ ನಡೆದ ದ.ಆಫ್ರಿಕಾ, ಆಫ್ಘನ್‌ ವಿರುದ್ಧದ ಸರಣಿಗಳಲ್ಲೂ ಚಹಲ್‌ ತಂಡದಲ್ಲಿರಲಿಲ್ಲ. ಆದರೆ ಈ ಐಪಿಎಲ್‌ನಲ್ಲಿ ಅವರ ಪ್ರದರ್ಶನವನ್ನು ಮಾನದಂಡವಾಗಿಟ್ಟುಕೊಂಡು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಮಾನದಂಡವನ್ನು ಆಯ್ಕೆ ಸಮಿತಿ ಉಳಿದ ಐಪಿಎಲ್‌ ಹೀರೋಗಳಿಗೆ ಅನ್ವಯ ಮಾಡಿಲ್ಲ. ಎಲ್ಲರ ಗಮನ ಸೆಳೆಯುತ್ತಿರುವ ವೇಗಿ ಮಯಾಂಕ್‌ ಯಾದವ್‌, ಸ್ಫೋಟಕ ಬ್ಯಾಟರ್‌ಗಳಾದ ಶಶಾಂಕ್‌ ಸಿಂಗ್‌, ಅಶುತೋಷ್‌ ಶರ್ಮಾ, ರಿಯಾನ್‌ ಪರಾಗ್‌ಗೆ ಚಾನ್ಸ್‌ ಕೊಟ್ಟಿಲ್ಲ.

ರಿಂಕು ಕೈಬಿಟ್ಟು ದುಬೆಗೆ ಅವಕಾಶ ಕೊಟ್ಟಿದ್ದೇಕೆ?ತಜ್ಞ ಫಿನಿಶರ್‌ ರಿಂಕು ಸಿಂಗ್‌ರನ್ನು 15 ಸದಸ್ಯರ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಿಂಕು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರೂ ಅವರ ಬದಲು ಈ ಐಪಿಎಲ್‌ನಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಿರುವ ಶಿವಂ ದುಬೆಯನ್ನು ಆಯ್ಕೆ ಮಾಡಲಾಗಿದೆ. ರಿಂಕು ಅವಕಾಶದಿಂದ ವಂಚಿತರಾಗಲು, ಐಪಿಎಲ್‌ನ ‘ಇಂಪ್ಯಾಕ್ಟ್‌ ಆಟಗಾರ’ ನಿಯಮವೇ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ. ಈ ನಿಯಮದಿಂದಾಗಿ ಕೆಕೆಆರ್‌ ತಂಡ ರಿಂಕುರನ್ನು ತಜ್ಞ ಫಿನಿಶರ್‌ ಆಗಿ ಬಳಸಿಕೊಳ್ಳುತ್ತಿದ್ದು, ಅವರಿಗೆ ಮೇಲ್ಕ್ರಮಾಂಕದಲ್ಲಿ ಅವಕಾಶವನ್ನೇ ನೀಡುತ್ತಿಲ್ಲ. ಈ ಐಪಿಎಲ್‌ನಲ್ಲಿ ಅವರು 8 ಇನ್ನಿಂಗ್ಸಲ್ಲಿ ಎದುರಿಸಿರುವುದು ಕೇವಲ 82 ಎಸೆತ. ಇದೇ ವೇಳೆ 9 ಇನ್ನಿಂಗ್ಸಲ್ಲಿ 203 ಎಸೆತ ಎದುರಿಸಿರುವ ದುಬೆ, ಅಬ್ಬರದ ಆಟವಾಡಿ ಆಯ್ಕೆ ರೇಸ್‌ನಲ್ಲಿ ಗೆದ್ದಿದ್ದಾರೆ. ವಿಂಡೀಸ್‌ನ ನಿಧಾನಗತಿಯ ಪಿಚ್‌ಗಳಲ್ಲಿ ದುಬೆ ಬೌಲಿಂಗ್‌ನಲ್ಲೂ ನೆರವಾಗಬಲ್ಲರು ಎನ್ನುವುದೂ ಅವರ ಆಯ್ಕೆಗೆ ಕಾರಣವಿರಬಹುದು.