ಸಾರಾಂಶ
ನವದೆಹಲಿ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ ಆಟಗಾರರು ಗುರುವಾರ ಬಾರ್ಬಡೊಸ್‌ನಿಂದ ತವರಿಗೆ ಮರಳಲಿದ್ದು, ಅದ್ಧೂರಿ ಸ್ವಾಗತ ಏರ್ಪಡಿಸಲಾಗಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭೋಜನ ಕೂಟ ಕೂಡಾ ನಡೆಯಲಿದೆ.ಶನಿವಾರವೇ ವಿಶ್ವಕಪ್ ಕೊನೆಗೊಂಡಿದ್ದರೂ ಚಂಡಮಾರುತದ ಕಾರಣಕ್ಕೆ ಬಾರ್ಬಡೊಸ್‌ನಲ್ಲೇ ಬಾಕಿಯಾಗಿದ್ದ ಆಟಗಾರರು ಬುಧವಾರ ವಿಶೇಷ ವಿಮಾನವೇರಿದ್ದಾರೆ.
ಬಿಸಿಸಿಐ ಪದಾಧಿಕಾರಿಗಳು, ಭಾರತೀಯ ಪತ್ರಕರ್ತರು ಕೂಡಾ ಆಟಗಾರರು ಹಾಗೂ ಕೋಚ್‌ಗಳ ಜೊತೆ ಭಾರತಕ್ಕೆ ಮರಳಲಿದ್ದಾರೆ. ಬೆಳಗ್ಗೆ 6.20ಕ್ಕೆ ನವದೆಹಲಿ ವಿಮಾನ ನಿಲ್ದಾಣಕ್ಕೆ ತಂಡ ಆಗಮಿಸಲಿದೆ. ಬಳಿಕ ಭಾರತೀಯ ಆಟಗಾರರಿಗೆ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ‘ಬೆಳಗ್ಗೆ 6 ಗಂಟೆಗೆ ವಿಮಾನ ನವದೆಹಲಿಗೆ ಆಗಮಿಸಲಿದೆ. 11 ಗಂಟೆಗೆ ಪ್ರಧಾನಿ ಮೋದಿ ನಿವಾಸದಲ್ಲಿ ಭೋಜನ ಕೂಟ’ ನಡೆಯಲಿದೆ ಎಂದಿದ್ದಾರೆ.
ಮುಂಬೈನಲ್ಲಿ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ!
ಪ್ರಧಾನಿ ಮೋದಿ ನಿವಾಸದಲ್ಲಿ ಭೋಜನಕೂಟದಲ್ಲಿ ಪಾಲ್ಗೊಂಡ ಬಳಿಕ ಆಟಗಾರರು ಮುಂಬೈಗೆ ಪ್ರಯಾಣಿಸಲಿದ್ದಾರೆ. ಸಂಜೆ 5 ಗಂಟೆಯಿಂದ ನಾರಿಮನ್ ಪಾಯಿಂಟ್‌ನಿಂದ ಸುಮಾರು 2 ಕಿ.ಮೀ. ದೂರ ಇರುವ ವಾಂಖೇಡೆ ಕ್ರೀಡಾಂಗಣದ ವರೆಗೆ ಆಟಗಾರರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಿದ್ದಾರೆ. 2 ಗಂಟೆಗಳ ಕಾಲ ಮೆರವಣಿಗೆ ನಡೆಯುವ ನಿರೀಕ್ಷೆಯಿದ್ದು, ಬಳಿಕ 7 ಗಂಟೆಗೆ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಿಸಿಸಿಐ ಘೋಷಿಸಿರುವ 125 ಕೋಟಿ ರು. ನಗದು ಬಹುಮಾನವನ್ನೂ ಇದೇ ವೇಳೆ ಹಸ್ತಾಂತರಿಸಲಾಗುತ್ತದೆ.
ಸಂಭ್ರಮಾಚರಣೆಗೆ ಬನ್ನಿ: ಫ್ಯಾನ್ಸ್‌ಗೆ ರೋಹಿತ್, ಶಾ ಆಹ್ವಾನ
ಮುಂಬೈನಲ್ಲಿ ನಡೆಯಲಿರುವ ಆಟಗಾರರ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ಭಾರತದ ನಾಯಕ ರೋಹಿತ್ ಶರ್ಮಾ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ. ‘ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜೊತೆಯಾಗಿ’ ಎಂದು ರೋಹಿತ್ ಟ್ವೀಟ್ ಮಾಡಿದ್ದಾರೆ. ‘ಟೀಂ ಇಂಡಿಯಾದ ವಿಶ್ವಕಪ್ ಗೆಲುವಿನ ವಿಕ್ಟರಿ ಪೆರೇಡ್‌ಗಾಗಿ ನಮ್ಮೊಂದಿಗೆ ಸೇರಿಕೊಳ್ಳಿ. ಜು.4 ರಂದು ಸಂಜೆ 5 ಗಂಟೆಯಿಂದ ಮರೈನ್ ಡ್ರೈವ್ ಹಾಗೂ ವಾಂಖೆಡೆ ಸ್ಟೇಡಿಯಂ ವರೆಗೆ ಆಟಗಾರರ ಬೃಹತ್ ಮೆರವಣಿಗೆ ನಡೆಯಲಿದೆ. ನಮ್ಮೊಂದಿಗೆ ನೀವೂ ಸೇರಿಕೊಳ್ಳಿ’ ಎಂದು ಶಾ ವಿನಂತಿಸಿದ್ದಾರೆ.