ಸಾರಾಂಶ
ಬ್ರಿಡ್ಜ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನೊಂದಿಗೆ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಅಳಿವು ಉಳಿವಿನ ಸ್ಥಿತಿಗೆ ತಲುಪಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ, ಸೂಪರ್-8 ಹಂತದ ನಿರ್ಣಾಯಕ ಪಂದ್ಯದಲ್ಲಿ ಭಾನುವಾರ ಅಮೆರಿಕ ವಿರುದ್ಧ ಸೆಣಸಾಡಲಿದೆ. ಸೆಮಿಫೈನಲ್ ರೇಸ್‌ನಲ್ಲಿ ಉಳಿದುಕೊಳ್ಳಲು ತಂಡಕ್ಕೆ ಗೆಲುವು ಅತ್ಯಗತ್ಯವಾಗಿದ್ದು, ಸೋತರೆ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ.
ಸೂಪರ್-8ರ ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ್ದ ಇಂಗ್ಲೆಂಡ್, ದ.ಆಫ್ರಿಕಾ ವಿರುದ್ಧದ ಕಳೆದ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ಎಡವಿ ಸೋಲನುಭವಿಸಿತ್ತು. ತಂಡ 2 ಪಂದ್ಯದಲ್ಲಿ 2 ಅಂಕ ಹೊಂದಿದ್ದು, ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ದ.ಆಫ್ರಿಕಾ 2 ಜಯದೊಂದಿಗೆ 4 ಅಂಕ, ವಿಂಡೀಸ್ 2 ಅಂಕ ಹೊಂದಿದೆ. ಹೀಗಾಗಿ ಇಂಗ್ಲೆಂಡ್ ಈ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆದ್ದರಷ್ಟೇ ಸೆಮೀಸ್ ಪ್ರವೇಶಿಸಬಹುದು. ಅತ್ತ ಅಮೆರಿಕ ಈಗಾಗಲೇ ಎರಡು ಪಂದ್ಯಗಳಲ್ಲೂ ಸೋತಿದೆ. ಆದರೂ ತಂಡಕ್ಕೆ ಸೆಮೀಸ್ ಅವಕಾಶ ಇದೆ. ಇಂಗ್ಲೆಂಡ್‌ನ ದೊಡ್ಡ ಅಂತರದಲ್ಲಿ ಸೋಲಿಸಿ, ಅತ್ತ ದ.ಆಫ್ರಿಕಾ ವಿರುದ್ಧ ವಿಂಡೀಸ್ ಸೋತರೆ ಅಮೆರಿಕಕ್ಕೆ ನೆಟ್ ರನ್‌ರೇಟ್ ಆಧಾರದಲ್ಲಿ ಸೆಮೀಸ್‌ಗೇರುವ ಅವಕಾಶ ಸಿಗಲಿದೆ. ಪಂದ್ಯ ಆರಂಭ: ರಾತ್ರಿ 8 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್.