ಸಾರಾಂಶ
ಹೈದರಾಬಾದ್: ತವರಿನ ಪಿಚ್‌ನ ಲಾಭ, ಸ್ಪಿನ್ ಅಸ್ತ್ರ, ತವರಿನ ಸತತ ಗೆಲುವಿನ ದಾಖಲೆ. ಇದ್ಯಾವುದೂ ಈ ಬಾರಿ ಟೀಂ ಇಂಡಿಯಾದ ಕೈ ಹಿಡಿಯಲಿಲ್ಲ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 5-0 ಅಂತರದಲ್ಲಿ ಗೆಲ್ಲಬಹುದು ಎಂದೇ ವಿಶ್ಲೇಷಿಸಲಾಗಿದ್ದರೂ, ಭಾರತಕ್ಕೆ ಆರಂಭಿಕ ಪಂದ್ಯದಲ್ಲೇ ಸೋಲಿನ ಆಘಾತ ಎದುರಾಗಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ಭಾನುವಾರ ಮೊದಲ ಟೆಸ್ಟ್‌ನಲ್ಲಿ 28 ರನ್ ಸೋಲು ಕಂಡಿದ್ದು, ಸರಣಿಯಲ್ಲಿ 0-1 ಹಿನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 190 ರನ್ ಹಿನ್ನಡೆ ಅನುಭವಿದ್ದ ಇಂಗ್ಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ ಕಲೆಹಾಕಿದ್ದು ಬರೋಬ್ಬರಿ 420 ರನ್. ಭಾರತದ ಸಿಕ್ಕಿದ್ದು 231 ರನ್ ಗುರಿ. ಆದರೆ ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೊಳಗಾದ ಭಾರತ 202 ರನ್‌ಗೆ ಗಂಟುಮೂಟೆ ಕಟ್ಟಿತು.
ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿದ್ದ ಭಾರತ ಬಳಿಕ ನಾಟಕೀಯ ಕುಸಿತಕ್ಕೊಳಗಾಯಿತು. ಚೊಚ್ಚಲ ಪಂದ್ಯವಾಡುತ್ತಿರುವ ಟಾಮ್ ಹಾರ್ಟ್ಲಿ ಸ್ಪಿನ್ ದಾಳಿ ಮುಂದೆ ತತ್ತರಿಸಿದ ಭಾರತೀಯ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದರು.
ರೋಹಿತ್ ಗಳಿಸಿದ 39 ರನ್ ತಂಡದ ಪರ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತ. ಕೆ.ಎಲ್.ರಾಹುಲ್ ಕೊಡುಗೆ 22 ರನ್. 8ನೇ ವಿಕೆಟ್‌ಗೆ ಆರ್.ಅಶ್ವಿನ್(28) ಹಾಗೂ ಶ್ರೀಕರ್ ಭರತ್(28) ಹೋರಾಟದ 57 ರನ್ ಜೊತೆಯಾಟವಾಡಿದರೂ ತಂಡವನ್ನು ಗೆಲ್ಲಲು ಇಂಗ್ಲೆಂಡ್ ಬಿಡಲಿಲ್ಲ.
ಹಾರ್ಟ್ಲಿ 62 ರನ್ ನೀಡಿ 7 ವಿಕೆಟ್ ಕಬಳಿಸಿದರು.ಪೋಪ್ ಆರ್ಭಟ: ಇದಕ್ಕೂ ಮೊದಲು 3ನೇ ದಿನದದಂತ್ಯಕ್ಕೆ 6 ವಿಕೆಟ್‌ಗೆ 316 ರನ್ ಗಳಿಸಿದ್ದ ಇಂಗ್ಲೆಂಡ್ ಭಾನುವಾರವೂ ಮಿಂಚಿನ ಬ್ಯಾಟಿಂಗ್ ನಡೆಸಿತು.
148 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ಓಲಿ ಪೋಪ್ ದ್ವಿಶತಕದತ್ತ ಮುನ್ನುಗ್ಗುತ್ತಿದ್ದಾಗ ಬೂಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಅವರು 278 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 196 ರನ್ ಚಚ್ಚಿ, ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿದರು.
ಬೂಮ್ರಾ 4, ಅಶ್ವಿನ್ 3 ವಿಕೆಟ್ ಕಬಳಿಸಿದರು.ಸ್ಕೋರ್: ಇಂಗ್ಲೆಂಡ್ 246/10 ಮತ್ತು 420/10 (ಪೋಪ್ 196, ಬೂಮ್ರಾ 4-41, ಅಶ್ವಿನ್ 3-126), ಭಾರತ 436/10 ಮತ್ತು 202/10(ರೋಹಿತ್ 39, ಅಶ್ವಿನ್ 28, ಭರತ್ 28, ಹಾರ್ಟ್ಲಿ 7-62) ಪಂದ್ಯಶ್ರೇಷ್ಠ: ಓಲಿ ಪೋಪ್
ತವರಿನ ಕೊನೆಯ 3
ಪಂದ್ಯದಲ್ಲಿ ಗೆಲುವಿಲ್ಲ: ಭಾರತ ತವರಿನ ಕೊನೆ 3 ಪಂದ್ಯಗಳಲ್ಲಿ ಗೆಲುವಿನಿಂದ ವಂಚಿತವಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂದೋರ್ ಟೆಸ್ಟ್‌ನಲ್ಲಿ 9 ವಿಕೆಟ್ ಸೋಲನುಭವಿಸಿದ್ದ ಭಾರತ, ಅಹಮದಾಬಾದ್ ಟೆಸ್ಟ್‌ನಲ್ಲಿ ಡ್ರಾ ಮಾಡಿಕೊಂಡಿತ್ತು.
ತವರಿನಲ್ಲಿ ಭಾರತ ಸತತ 3 ಪಂದ್ಯಗಳಲ್ಲಿ ಗೆಲ್ಲದೇ ಇರುವುದು ಕಳೆದ 12 ವರ್ಷಗಳಲ್ಲೇ ಮೊದಲು.
01ನೇ ಬಾರಿ
ತವರಿನ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 100+ ರನ್ ಮುನ್ನಡೆ ಪಡೆದರೂ ಭಾರತ ಸೋಲನುಭವಿಸಿದ್ದು ಇದೇ ಮೊದಲು.