ಬಾಂಗ್ಲನ್ನರ ಒದ್ದೋಡಿಸಿ ಗೆದ್ದ ಟೀಂ ಇಂಡಿಯಾ ಚಾಂಪಿಯನ್ಸ್‌ ಟ್ರೋಫಿ : ಬಾಂಗ್ಲಾ ವಿರುದ್ಧ 6 ವಿಕೆಟ್‌ ಜಯಭೇರಿ

| N/A | Published : Feb 21 2025, 11:52 AM IST

team india final squad for ct 2025
ಬಾಂಗ್ಲನ್ನರ ಒದ್ದೋಡಿಸಿ ಗೆದ್ದ ಟೀಂ ಇಂಡಿಯಾ ಚಾಂಪಿಯನ್ಸ್‌ ಟ್ರೋಫಿ : ಬಾಂಗ್ಲಾ ವಿರುದ್ಧ 6 ವಿಕೆಟ್‌ ಜಯಭೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ತಾನೇಕೆ ಮಾಜಿ ಚಾಂಪಿಯನ್‌ ಎಂಬುದನ್ನು ಈ ಬಾರಿ ಚಾಂಪಿಯನ್ಸ್‌ ಟ್ರೋಫಿಯ ಆರಂಭಿಕ ಪಂದ್ಯದಲ್ಲೇ ತೋರಿಸಿಕೊಟ್ಟಿದೆ. ಆರಂಭದಲ್ಲಿ ಬೆಂಕಿ ಬೌಲಿಂಗ್‌ ಬಳಿಕ ಬ್ಯಾಟರ್‌ಗಳ ಅಬ್ಬರದ ಪ್ರದರ್ಶನದಿಂದಾಗಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸಿದೆ

ದುಬೈ: ಭಾರತ ತಾನೇಕೆ ಮಾಜಿ ಚಾಂಪಿಯನ್‌ ಎಂಬುದನ್ನು ಈ ಬಾರಿ ಚಾಂಪಿಯನ್ಸ್‌ ಟ್ರೋಫಿಯ ಆರಂಭಿಕ ಪಂದ್ಯದಲ್ಲೇ ತೋರಿಸಿಕೊಟ್ಟಿದೆ. ಆರಂಭದಲ್ಲಿ ಬೆಂಕಿ ಬೌಲಿಂಗ್‌ ಬಳಿಕ ಬ್ಯಾಟರ್‌ಗಳ ಅಬ್ಬರದ ಪ್ರದರ್ಶನದಿಂದಾಗಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸಿದೆ. ಈ ಮೂಲಕ ಬದ್ಧವೈರಿ ಪಾಕಿಸ್ತಾನ ವಿರುದ್ಧ ದುಬೈನಲ್ಲೇ ನಡೆಯಲಿರುವ ಪಂದ್ಯಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.

ಭಾರತ ಸತತ 11ನೇ ಪಂದ್ಯಗಳಲ್ಲಿ ಟಾಸ್‌ ಸೋತಿತು. ಇದರಿಂದ ತಂಡಕ್ಕೆ ನಷ್ಟವೇನೂ ಆಗಲಿಲ್ಲ. ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಬಾಂಗ್ಲಾ ತರಗೆಲೆಯಂತೆ ಉರುಳಿತು. ಆದರೆ ತೌಹಿದ್‌ ಹೃದೊಯ್‌, ಜಾಕರ್‌ ಅಲಿ ಹೋರಾಟ ಬಾಂಗ್ಲಾಕ್ಕೆ ಆಕ್ಸಿಜನ್‌ ನೀಡಿತು. ತಂಡ 49.4 ಓವರ್‌ಗಳಲ್ಲಿ 228ಕ್ಕೆ ಆಲೌಟಾಯಿತು.

ಈ ಮೊತ್ತ ಭಾರತಕ್ಕೆ ಕಡಿಮೆಯೇ ಆಗಿದ್ದರೂ, ಗೆಲುವು ಮಾತ್ರ ನಿರೀಕ್ಷಿಸಿದಷ್ಟು ಸುಲಭದಲ್ಲಿ ದಕ್ಕಲಿಲ್ಲ. ತಂಡ 46.3 ಓವರ್‌ಗಳಲ್ಲಿ ಗೆಲುವನ್ನು ತನ್ನತ್ತ ಒಲಿಸಿಕೊಂಡಿತು.

ರೋಹಿತ್‌ ಶರ್ಮಾ-ಶುಭ್‌ಮನ್‌ ಗಿಲ್‌ ಆರಂಭಿಕ ವಿಕೆಟ್‌ಗೆ 9.5 ಓವರ್‌ಗಳಲ್ಲಿ 69 ರನ್‌ ಸೇರಿಸಿದರು. ಅಬ್ಬರದ ಆಟವಾಡಿದ ರೋಹಿತ್‌ 36 ಎಸೆತಕ್ಕೆ 41 ರನ್‌ ಗಳಿಸಿದರು. ಬಾಂಗ್ಲಾ ಬೌಲರ್‌ಗಳನ್ನು ಎದುರಿಸಲು ಪರದಾಟ ನಡೆಸುತ್ತಿದ್ದ ಕೊಹ್ಲಿ, 22 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಶ್ರೇಯಸ್‌ ಅಯ್ಯರ್‌(15), ಅಕ್ಷರ್‌ ಪಟೇಲ್‌(8) ದೊಡ್ಡ ಹೊಡೆತಕ್ಕೆ ಕೈ ಹಾಕಿ ತಂಡವನ್ನು ಸಂಕಷ್ಟಕ್ಕೆ ದೂಡಿದರು.

ಆದರೆ ಆಪತ್ಬಾಂಧವ ಕೆ.ಎಲ್‌.ರಾಹುಲ್‌ರನ್ನು ಜೊತೆ ಸೇರಿಸಿದ ಗಿಲ್‌, ಭಾರತಕ್ಕೆ ಗೆಲುವು ಖಚಿತಪಡಿಸಿಕೊಂಡರು. ಈ ಜೋಡಿ ಮುರಿಯದ 5ನೇ ವಿಕೆಟ್‌ಗೆ 87 ರನ್‌ ಸೇರಿಸಿತು. ಬಾಂಗ್ಲಾ ಬೌಲರ್‌ಗಳನ್ನು ಚೆಂಡಾಡಿದ ಗಿಲ್‌ 129 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಔಟಾಗದೆ 101 ರನ್‌ ಗಳಿಸಿದರೆ, ರಾಹುಲ್‌ 47 ಎಸೆತಗಳಲ್ಲಿ 41 ರನ್‌ ಬಾರಿಸಿದರು.

ಹೃದಯ ಗೆದ್ದ ಹೃದೊಯ್: ಇದಕ್ಕೂ ಮುನ್ನ ಬಾಂಗ್ಲಾ ಆರಂಭ ಅತ್ಯಂತ ಕಳಪೆಯಾಗಿತ್ತು. ಆರಂಭಿಕ ಸ್ಪೆಲ್‌ನಲ್ಲೇ ಸೌಮ್ಯಾ, ಮೆಹಿದಿ ಹಸನ್‌ ಮೀರಾಜ್‌ ವಿಕೆಟ್‌ ಕಿತ್ತ ಶಮಿ ಭಾರತಕ್ಕೆ ಮುನ್ನಡೆ ಒದಗಿಸಿದರು. ತಂಜೀದ್‌, ಮುಷ್ಫಿಕುರ್‌ರಹೀಂ ವಿಕೆಟ್‌ಗಳನ್ನು ಅಕ್ಷರ್‌ ಸತತ ಎಸೆತಗಳಲ್ಲಿ ಕಿತ್ತಾಗ ತಂಡದ ಸ್ಕೋರ್‌ 5 ವಿಕೆಟ್‌ಗೆ 35.

ಆದರೆ ತೌಹೀದ್ ಹೃದೊರ್‌-ಜಾಕಲ್‌ ಅಲಿ ಭರ್ಜರಿ 154 ರನ್‌ ಜೊತೆಯಾಟವಾಡಿ ಭಾರತವನ್ನು ಕಾಡಿದರು. ಈ ಜೋಡಿಯನ್ನು ಶಮಿ ಬೇರ್ಪಡಿಸಿದರು. ಜಾಕರ್‌ 68ಕ್ಕೆ ಔಟಾದರು. ಆದರೆ ಕೊನೆವರೆಗೂ ಕ್ರೀಸ್‌ನಲ್ಲಿ ನಿಂತ ತೌಹಿದ್‌ 118 ಎಸೆತಗಳಲ್ಲಿ 110 ರನ್‌ ಸಿಡಿಸಿ ಔಟಾದರು. ಶಮಿ 5, ಹರ್ಷಿತ್‌ ರಾಣಾ 3, ಅಕ್ಷರ್‌ ಪಟೇಲ್‌ 2 ವಿಕೆಟ್‌ ಕಿತ್ತರು.

ಸ್ಕೋರ್‌: ಬಾಂಗ್ಲಾದೇಶ 49.4 ಓವರಲ್ಲಿ 228/10 (ತೌಹಿದ್‌ 100, ಜಾಕರ್‌ 68, ಶಮಿ 5-53, ಹರ್ಷಿತ್‌ 3-31), ಭಾರತ 46.3 ಓವರಲ್ಲಿ 231/4 (ಗಿಲ್‌ ಔಟಾಗದೆ 101, ರಾಹುಲ್‌ ಔಟಾಗದೆ 41, ರೋಹಿತ್‌ 41, ರಿಶಾದ್‌ 2-38)