ಸಾರಾಂಶ
ರಾಂಚಿ: ಬೆಂಕಿ ಬೌಲರ್ ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿಯ ನಡುವೆಯೇ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಶುಕ್ರವಾರದಿಂದ ಇಲ್ಲಿನ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಮೈದಾನದಲ್ಲಿ ಆರಂಭಗೊಳ್ಳಲಿರುವ 4ನೇ ಟೆಸ್ಟ್‌ನಲ್ಲಿ ಜಯಭೇರಿ ಬಾರಿಸಲು ಕಾತರಿಸುತ್ತಿದೆ. 5 ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುಂದಿರುವ ಭಾರತ, ಈ ಪಂದ್ಯವನ್ನು ಗೆದ್ದರೆ ತವರಿನಲ್ಲಿ ಸತತ 17ನೇ ಟೆಸ್ಟ್ ಸರಣಿ ಗೆದ್ದಂತಾಗುತ್ತದೆ.2012ರಲ್ಲಿ ಅಲಿಸ್ಟೈರ್ ಕುಕ್ ನೇತೃತ್ವದ ಇಂಗ್ಲೆಂಡ್ ವಿರುದ್ಧ ಎದುರಾಗಿದ್ದ ಸರಣಿ ಸೋಲೇ ಕೊನೆ. ಆ ಬಳಿಕ 12 ವರ್ಷಗಳಿಂದ ಭಾರತ ತವರಿನಲ್ಲಿ ಸರಣಿ ಸೋಲು ಕಂಡಿಲ್ಲ. ಈ ಅವಧಿಯಲ್ಲಿ ಆಡಿರುವ 47 ಟೆಸ್ಟ್‌ಗಳಲ್ಲಿ 38ರಲ್ಲಿ ಜಯಭೇರಿ ಬಾರಿಸಿದ್ದು, ಕೇವಲ 4ರಲ್ಲಿ ಸೋಲು ಕಂಡಿದೆ.ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಅಲಭ್ಯರಾದರೂ, ಭಾರತದ ಯುವ ಬ್ಯಾಟರ್‌ಗಳ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಪ್ರಚಂಡ ಲಯದಲ್ಲಿರುವ ಯಶಸ್ವಿ ಜೈಸ್ವಾಲ್ ಈ ಸರಣಿಯಲ್ಲಿ 3 ಪಂದ್ಯಗಳಿಂದ 545 ರನ್ ಕಲೆಹಾಕಿದರೆ, ಸರ್ಫರಾಜ್ ಖಾನ್ ತಮ್ಮ ಪಾದಾರ್ಪಣಾ ಪಂದ್ಯದಲ್ಲೇ ಮಿಂಚಿ ಭರವಸೆ ಮೂಡಿಸಿದ್ದಾರೆ. ಶುಭ್‌ಮನ್ ಗಿಲ್ 3ನೇ ಕ್ರಮಾಂಕಕ್ಕೆ ನಿಧಾನವಾಗಿ ಒಗ್ಗಿಕೊಳ್ಳುತ್ತಿದ್ದು, ಮುಂದಿನ ಹಲವು ವರ್ಷಗಳ ಕಾಲ ಆ ಸ್ಥಾನದಲ್ಲಿ ಭಾರತದ ಆಧಾರಸ್ತಂಭವಾಗುವ ನಿರೀಕ್ಷೆ ಮೂಡಿಸಿದ್ದಾರೆ.ಭಾರತದ ಕೆಳ ಕ್ರಮಾಂಕವೂ ಉತ್ತಮ ಕೊಡುಗೆ ನೀಡುತ್ತಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚೇನೂ ಸಮಸ್ಯೆ ಕಾಣುತ್ತಿಲ್ಲ. ಮುಂಚೂಣಿ ವೇಗಿ ಜಸ್‌ಪ್ರೀತ್ ಬೂಮ್ರಾ, ಈ ಸರಣಿಯಲ್ಲಿ ಅತಿಹೆಚ್ಚು ವಿಕೆಟ್ (17) ಪಡೆದಿರುವ ಬೌಲರ್ ಆಗಿದ್ದು, ಅವರ ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡಬಹುದು. ಸರಣಿಯಲ್ಲಿ 80 ಓವರ್‌ಗೂ ಹೆಚ್ಚು ಬೌಲ್ ಮಾಡಿರುವ ಕಾರಣ, ಮುಂಬರುವ ಐಪಿಎಲ್ ಹಾಗೂ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಬೂಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ, ಮೊಹಮದ್ ಸಿರಾಜ್ ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ.ಭಾರತದ 5ನೇ ಬೌಲಿಂಗ್ ಆಯ್ಕೆ ಯಾರಾಗಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಮೊದಲ 3 ಟೆಸ್ಟ್‌ಗಳಂತೆ ಈ ಪಂದ್ಯದಲ್ಲೂ ಇಬ್ಬರು ವೇಗಿಗಳನ್ನು ಆಡಿಸಲು ನಿರ್ಧರಿಸಿದರೆ ಮುಕೇಶ್ ಕುಮಾರ್ ಅಥವಾ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಪಡೆದರೆ ಬಂಗಾಳದ ಆಕಾಶ್ ದೀಪ್‌ಗೆ ಅವಕಾಶ ಸಿಗಲಿದೆ. ಒಂದು ವೇಳೆ ನಾಲ್ವರು ಸ್ಪಿನ್ನರ್‌ಗಳನ್ನು ಆಡಿಸಲು ತೀರ್ಮಾನಿಸಿದರೆ ಆಗ ಅಕ್ಷರ್ ಪಟೇಲ್ ಆಡುವ ಹನ್ನೊಂದರ ಬಳಗದಲ್ಲಿ ಇರಲಿದ್ದಾರೆ.ಇಂಗ್ಲೆಂಡ್‌ಗೆ ಮಧ್ಯಮ ಕ್ರಮಾಂಕದ ಚಿಂತೆ: ಪ್ರವಾಸಿ ಇಂಗ್ಲೆಂಡ್ ತನ್ನ ‘ಬಾಜ್‌ಬಾಲ್’ ಆಟದ ಶೈಲಿಯಿಂದ ನಿರೀಕ್ಷಿತ ಯಶಸ್ಸು ಗಳಿಸುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ. ಜೋ ರೂಟ್, ಜಾನಿ ಬೇರ್‌ಸ್ಟೋವ್, ಬೆನ್ ಸ್ಟೋಕ್ಸ್, ಬೆನ್ ಫೋಕ್ಸ್ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾಗುತ್ತಿದ್ದಾರೆ. ಹೀಗಾಗಿ ಆರಂಭಿಕರಾದ ಬೆನ್ ಡಕೆಟ್, ಜ್ಯಾಕ್ ಕ್ರಾಲಿ ಹಾಗೂ ಬೌಲರ್‌ಗಳ ಮೇಲೆ ಅತಿಯಾದ ಒತ್ತಡ ಬೀಳುತ್ತಿದೆ. ಈ ಪಂದ್ಯಕ್ಕೆ ಇಂಗ್ಲೆಂಡ್ 2 ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದಾಗಿ ಪ್ರಕಟಿಸಿದೆ. ವೇಗಿ ಮಾರ್ಕ್ ವುಡ್ ಬದಲಿಗೆ ಓಲಿ ರಾಬಿನ್ಸನ್, ಸ್ಪಿನ್ನರ್ ರೆಹಾನ್ ಅಹ್ಮದ್ ಬದಲು ಶೋಯಬ್ ಬಶೀರ್‌ಗೆ ಅವಕಾಶ ನೀಡಲಾಗಿದೆ. ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಇಂಗ್ಲೆಂಡ್‌ನ ಆಟದ ಶೈಲಿಯ ಬಗ್ಗೆ ಕುತೂಹಲವಿದೆ.ಸಂಭವನೀಯ ಆಟಗಾರರ ಪಟ್ಟಿಭಾರತ: ರೋಹಿತ್ (ನಾಯಕ), ಜೈಸ್ವಾಲ್, ಶುಭ್‌ಮನ್ ಗಿಲ್, ಪಾಟೀದಾರ್, ಸರ್ಫರಾಜ್, ಜುರೆಲ್, ಜಡೇಜಾ, ಅಶ್ವಿನ್, ಕುಲ್ದೀಪ್, ಸಿರಾಜ್, ಮುಕೇಶ್/ಆಕಾಶ್.ಇಂಗ್ಲೆಂಡ್ (ಆಡುವ XI): ಕ್ರಾಲಿ, ಡಕೆಟ್, ಓಲಿ ಪೋಪ್, ಜೋ ರೂಟ್, ಬೇರ್‌ಸ್ಟೋವ್, ಸ್ಟೋಕ್ಸ್(ನಾಯಕ), ಫೋಕ್ಸ್, ಹಾರ್ಟ್ಲಿ, ಬಶೀರ್, ರಾಬಿನ್ಸನ್, ಆ್ಯಂಡರ್‌ಸನ್.ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ನೇರ ಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ-ಪಿಚ್ ರಿಪೋರ್ಟ್
ರಾಂಚಿಯ ಪಿಚ್ ಸಾಮಾನ್ಯವಾಗಿ ಮೊದಲೆರಡು ದಿನ ಬ್ಯಾಟಿಂಗ್ ಸ್ನೇಹಿಯಾಗಿರಲಿದ್ದು, 3ನೇ ದಿನದಿಂದ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಒದಗಿಸಲಿದೆ. ಪಿಚ್‌ನಲ್ಲಿ ಈಗಾಗಲೇ ಬಿರುಕುಗಳಿದ್ದು, ಖಂಡಿತವಾಗಿಯೂ ಚೆಂಡು ಸ್ಪಿನ್ ಆಗಲಿದೆ. ಆದರೆ ಯಾವಾಗ ಮತ್ತು ಎಷ್ಟು ಸ್ಪಿನ್ ಆಗಲಿದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟ್ ಮಾಡುವ ಸಾಧ್ಯತೆಯೇ ಹೆಚ್ಚು.
)
;Resize=(128,128))
;Resize=(128,128))
;Resize=(128,128))
;Resize=(128,128))