2025-27ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಹೆಡಿಂಗ್ಲಿ ಮೈದಾನದಲ್ಲಿ ನಡೆಯುತ್ತಿದ್ದು ಭಾರತ vsಇಂಗ್ಲೆಂಡ್‌ ವಿರುದ್ಧದ ಕೊನೆ ದಿನದ ಕ್ಲೈಮ್ಯಾಕ್ಸ್‌ ಭಾರೀ ಕುತೂಹಲ ಮೂಡಿಸಿದೆ.

ಲೀಡ್ಸ್‌: 2025-27ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅನ್ನು ಗೆಲುವಿನೊಂದಿಗೆ ಆರಂಭಿಸಬೇಕು ಎನ್ನುವ ಭಾರತದ ನಿರೀಕ್ಷೆ ಈಡೇರಬಹುದು. ಇಂಗ್ಲೆಂಡ್‌ ವಿರುದ್ಧ ಇಲ್ಲಿನ ಹೆಡಿಂಗ್ಲಿ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿರುವ ಭಾರತ, 364 ರನ್‌ ಕಲೆಹಾಕಿ ಆತಿಥೇಯ ತಂಡದ ಗೆಲುವಿಗೆ 371 ರನ್‌ ಗುರಿ ನೀಡಿದೆ.

ಸಾಮಾನ್ಯವಾಗಿ ಪಂದ್ಯದಲ್ಲಿ ಒಂದು ದಿನ ಬಾಕಿ ಇರುವಾಗ ಈ ಮೊತ್ತ ದೊಡ್ಡದೆನಿಸಬಹುದು. ಆದರೆ, ಇಂಗ್ಲೆಂಡ್‌ ತನ್ನ ‘ಬಾಜ್‌ಬಾಲ್‌’ ಶೈಲಿಯ ಆಟದಿಂದ ಯಾವುದೇ ದೊಡ್ಡ ಗುರಿಯನ್ನೂ ತಲುಪಬಹುದು ಎನ್ನುವ ಭೀತಿ ಇದ್ದೇ ಇದೆ. ಹೀಗಾಗಿ, ಹೆಡಿಂಗ್ಲಿಯಲ್ಲಿ ಕೊನೆ ದಿನದ ಕ್ಲೈಮ್ಯಾಕ್ಸ್‌ ಭಾರೀ ಕುತೂಹಲ ಮೂಡಿಸಿದೆ.

3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 90 ರನ್‌ ಗಳಿಸಿದ್ದ ಭಾರತ, ಸೋಮವಾರ ಆ ಮೊತ್ತಕ್ಕೆ ಕೇವಲ 2 ರನ್‌ ಸೇರಿಸಿದ್ದಾಗ ನಾಯಕ ಶುಭ್‌ಮನ್‌ ಗಿಲ್‌ (8)ರ ವಿಕೆಟ್‌ ಕಳೆದುಕೊಂಡಿತು. ಈ ಹಂತದಲ್ಲಿ ಭಾರತ ಕುಸಿತ ಕಂಡಿದ್ದರೆ, ಪಂದ್ಯ ಇಂಗ್ಲೆಂಡ್‌ ಪರ ವಾಲುತಿತ್ತು. ಆದರೆ, ಕೆ.ಎಲ್‌.ರಾಹುಲ್‌ ಹಾಗೂ ರಿಷಭ್‌ ಪಂತ್‌ರ ಶತಕಗಳು ಭಾರತಕ್ಕೆ ನೆರವಾದರು. ಈ ಜೋಡಿ 4ನೇ ವಿಕೆಟ್‌ಗೆ 195 ರನ್‌ ಸೇರಿಸಿತು. ಪಂತ್‌ 118 ರನ್‌ ಗಳಿಸಿ ಔಟಾದರೆ, ರಾಹುಲ್‌ 137 ರನ್‌ ಕಲೆಹಾಕಿದರು. ಇವರಿಬ್ಬರ ವಿಕೆಟ್‌ ಪತನಗೊಂಡ ಬಳಿಕ ಭಾರತ ದಿಢೀರ್‌ ಕುಸಿತ ಕಂಡಿತು. 333ಕ್ಕೆ 4 ವಿಕೆಟ್‌ನಿಂದ 364 ರನ್‌ಗೆ ಅಂದರೆ 31 ರನ್‌ಗೆ ಕೊನೆ 6 ವಿಕೆಟ್‌ ಕಳೆದುಕೊಂಡಿತು. ಕರುಣ್‌ ನಾಯರ್‌ 20, ಜಡೇಜಾ 25 ರನ್‌ ಗಳಿಸಿದರು.

ಸ್ಕೋರ್‌: ಭಾರತ 417 ಹಾಗೂ 364 (ರಾಹುಲ್‌ 137, ಪಂತ್‌ 118, ಟಂಗ್‌ 3-72, ಕಾರ್ಸ್‌ 3-80), ಇಂಗ್ಲೆಂಡ್‌ 465