9ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಸೋಲಿನ ಆರಂಭ : ನ್ಯೂಜಿಲೆಂಡ್‌ ವಿರುದ್ಧ 58 ರನ್‌ ಸೋಲು

| Published : Oct 05 2024, 07:57 AM IST

Womens Team India
9ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಸೋಲಿನ ಆರಂಭ : ನ್ಯೂಜಿಲೆಂಡ್‌ ವಿರುದ್ಧ 58 ರನ್‌ ಸೋಲು
Share this Article
  • FB
  • TW
  • Linkdin
  • Email

ಸಾರಾಂಶ

ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ನಿರೀಕ್ಷೆಯೊಂದಿಗೆ ಯುಎಇ ವಿಮಾನವೇರಿದ್ದ ಭಾರತ ಮಹಿಳಾ ತಂಡ, 9ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಸೋಲಿನ ಆರಂಭ ಪಡೆದಿದೆ.

ದುಬೈ: ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ನಿರೀಕ್ಷೆಯೊಂದಿಗೆ ಯುಎಇ ವಿಮಾನವೇರಿದ್ದ ಭಾರತ ಮಹಿಳಾ ತಂಡ, 9ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಸೋಲಿನ ಆರಂಭ ಪಡೆದಿದೆ. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿದ ಭಾರತ ತಂಡ ಶುಕ್ರವಾರ ನ್ಯೂಜಿಲೆಂಡ್‌ ವಿರುದ್ಧ 00 ರನ್‌ ಸೋಲನುಭವಿಸಿತು. ಇದರೊಂದಿಗೆ ಹರ್ಮನ್‌ಪ್ರೀತ್‌ ಕೌರ್‌ ಪಡೆ ಸೆಮಿಫೈನಲ್‌ ಹಾದಿಯನ್ನು ಆರಂಭದಲ್ಲೇ ಕಠಿಣಗೊಳಿಸಿದೆ. ಗುಂಪು ಹಂತದಲ್ಲೇ ತಂಡಕ್ಕೆ ಕಠಿಣ ಸವಾಲು ಎದುರಾಗಲಿದ್ದು, ಮುಂದಿನ ಎಲ್ಲಾ ಪಂದ್ಯಗಳಲ್ಲೂ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ತಂಡ 4 ವಿಕೆಟ್‌ ನಷ್ಟದಲ್ಲಿ 160 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಯಿತು. 00 ವಿಕೆಟ್‌ಗೆ 00 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಸ್ಫೋಟಕ ಆರಂಭದ ವಿಶ್ವಾಸ ಮೂಡಿಸಿದ್ದ ಸ್ಮೃತಿ ಮಂಧನಾ(12) ಹಾಗೂ ಶಫಾಲಿ ವರ್ಮಾ(02) ಕಡಿಮೆ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು. ಇಬ್ಬರನ್ನೂ ಈಡನ್‌ ಕಾರ್ಸನ್‌ ಪೆವಿಲಿಯನ್‌ಗೆ ಅಟ್ಟಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 14 ಎಸೆತಗಳಲ್ಲಿ 15 ರನ್‌ ಸಿಡಿಸಿ, ಬಂದಷ್ಟೇ ವೇಗದಲ್ಲಿ ಡಗೌಟ್‌ಗೆ ಮರಳಿದರು.

ಪವರ್‌-ಪ್ಲೇನಲ್ಲೇ ಪ್ರಮುಖ ಮೂವರನ್ನು ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲಿಲ್ಲ. 9ನೇ ಓವರ್‌ನಲ್ಲಿ ಜೆಮಿಮಾ ರೋಡ್ರಿಗ್ಸ್‌(12 ರನ್‌) ಹಾಗೂ 11ನೇ ಓವರ್‌ನಲ್ಲಿ ರಿಚಾ ಘೋಷ್‌(12 ರನ್‌) ಅವರನ್ನು ಔಟ್‌ ಮಾಡಿದ ಲೀ ತಹುಹು ಕಿವೀಸ್‌ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣರಾದರು. ಬಳಿಕ ದೀಪ್ತಿ ಶರ್ಮಾ(13 ರನ್‌) ಹಾಗೂ ಪೂಜಾ ವಸ್ತ್ರಾಕರ್‌(08 ರನ್‌) ಕೆಲ ಹೊತ್ತು ಹೋರಾಡುವ ನಿರೀಕ್ಷೆ ಮೂಡಿಸಿದರೂ ಅದಕ್ಕೆ ಕಿವೀಸ್‌ ಬೌಲರ್‌ಗಳು ಅವಕಾಶ ನೀಡಲಿಲ್ಲ. ನ್ಯೂಜಿಲೆಂಡ್‌ ಪರ ತಹುಹು 3, ಕಾರ್ಸನ್‌, ರೊಸಮೆರಿ ಮೈರ್‌ ತಲಾ 2 ವಿಕೆಟ್‌ ಪಡೆದರು.

ಡಿವೈನ್‌ ಅಬ್ಬರ: ಮೊದಲ ಎಸೆತದಲ್ಲೇ ಸುಜೀ ಬೇಟ್ಸ್‌ ಬೌಂಡರಿ ಬಾರಿಸುವ ಮೂಲಕ ತಂಡದ ರನ್‌ ಖಾತೆಯನ್ನು ಭರ್ಜರಿಯಾಗಿಯೇ ತೆರೆದರು. ತಂಡ ಉತ್ತಮ ಆರಂಭವನ್ನೂ ಪಡೆಯಿತು. ಮೊದಲ ವಿಕೆಟ್‌ಗೆ ಬೇಟ್ಸ್‌ ಹಾಗೂ ಜಾರ್ಜಿಯಾ ಪ್ಲಿಮ್ಮರ್‌ 67 ರನ್‌ ಜೊತೆಯಾಟವಾಡಿದರು. ಬೇಟ್ಸ್‌ 27, ಪ್ಲಿಮ್ಮರ್‌ 34 ರನ್‌ ಕೊಡುಗೆ ನೀಡಿದರು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿದ ನಾಯಕಿ ಸೋಫಿ ಡಿವೈನ್‌ ಸ್ಫೋಟಕ ಆಟವಾಡಿದರು. ಕೊನೆಯಲ್ಲಿ ಅಬ್ಬರಿಸಿದ ಅವರು ಕೇವಲ 36 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 57 ರನ್‌ ಸಿಡಿಸಿದರು. ಅಮೇಲಿ ಕೇರ್‌ 13, ಹಾಲ್ಲಿಡೇ 16 ರನ್‌ ಗಳಿಸಿ ತಂಡದ ಮೊತ್ತವನ್ನು 160ರ ಗಡಿ ತಲುಪಿಸಿದರು. ಭಾರತದ ಪರ ರೇಣುಕಾ ಸಿಂಗ್‌ 2 ವಿಕೆಟ್‌ ಕಿತ್ತರು.

ಸ್ಕೋರ್: ನ್ಯೂಜಿಲೆಂಡ್‌ 20 ಓವರಲ್ಲಿ 160/4 (ಸೋಫಿ ಡಿವೈನ್‌ ಔಟಾಗದೆ 57, ಪ್ಲಿಮ್ಮರ್‌ 34, ಬೇಟ್ಸ್‌ 27, ರೇಣುಕಾ 2-27, ಆಶಾ 1-22, ಅರುಂಧತಿ 1-28), ಭಾರತ 20 ಓವರಲ್ಲಿ 0000 (ಹರ್ಮನ್‌ಪ್ರೀತ್‌ 15, ದೀಪ್ತಿ 13, ಜೆಮಿಮಾ 13, ತಹುಹು 00)

ಟಿ20 ವಿಶ್ವಕಪ್‌: 3ನೇಬಾರಿ ಕಿವೀಸ್‌ಗೆ ಶರಣು

ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ 3ನೇ ಬಾರಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿತು. ಉಭಯ ತಂಡಗಳು 2009ರ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿತ್ತು. ಪಂದ್ಯದಲ್ಲಿ ಕಿವೀಸ್‌ ಗೆದ್ದಿತ್ತು. 2010ರಲ್ಲೂ ಕಿವೀಸ್‌ ಜಯಗಳಿಸಿತ್ತು. ಬಳಿಕ 2018, 2020ರಲ್ಲಿ ಭಾರತಕ್ಕೆ ಗೆಲುವು ಲಭಿಸಿತ್ತು.

ನಾಳೆ ಭಾರತ vs ಪಾಕ್

ಭಾರತ ತಂಡ ಟೂರ್ನಿಯ 2ನೇ ಪಂದ್ಯದಲ್ಲಿ ಭಾನುವಾರ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ನ್ಯೂಜಿಲೆಂಡ್‌ ವಿರುದ್ಧ ಸೋತಿರುವ ಕಾರಣ ಭಾರತ ತಂಡ ಪಾಕ್‌ ವಿರುದ್ಧ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಅತ್ತ ಪಾಕ್‌ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯಗಳಿಸಿದ್ದು, ಸತತ 2ನೇ ಗೆಲುವು ದಾಖಲಿಸುವ ಕಾತರದಲ್ಲಿದೆ.