ಸಾರಾಂಶ
ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಆಗಸ್ಟ್ 15ರಿಂದು ಚಾಲನೆ ಸಿಗಲಿದ್ದು, ಸೆ.1ರಂದು ತೆರೆ ಬೀಳಲಿದೆ.ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಟೂರ್ನಿಯ ದಿನಾಂಕ ಪ್ರಕಟಿಸಿ, ಟ್ರೋಫಿ ಅನಾವರಣಗೊಳಿಸಲಾಯಿತು.
ಈ ಬಾರಿಯೂ ಟೂರ್ನಿಯ ಎಲ್ಲಾ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿವೆ. ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ಕಳೆದ ಬಾರಿ ರನ್ನರ್-ಅಪ್ ಮೈಸೂರು ವಾರಿಯರ್ಸ್, 2022ರ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್, ಶಿವಮೊಗ್ಗ ಲಯನ್ಸ್, ಮಂಗಳೂರು ಡ್ರ್ಯಾಗನ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಪಾಲ್ಗೊಳ್ಳಲಿವೆ.
ಟೂರ್ನಿಯಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.ಸಮಾರಂಭದಲ್ಲಿ ದಿಗ್ಗಜ ಕ್ರಿಕೆಟಿಗ ಇಎಎಸ್ ಪ್ರಸನ್ನ, ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಮಹಾರಾಜ ಟ್ರೋಫಿ ಕಮಿಷನರ್ ಸಂಪತ್ ಕುಮಾರ್ ಸೇರಿ ಪ್ರಮುಖರು ಹಾಜರಿದ್ದರು.
ಜು.25ಕ್ಕೆ ಆಟಗಾರರ ಹರಾಜು ಪ್ರಕ್ರಿಯೆ
ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರ ಹರಾಜು ಪ್ರಕ್ರಿಯೆ ಜುಲೈ 25ರಂದು ನಡೆಯಲಿದೆ. 700ಕ್ಕೂ ಹೆಚ್ಚಿನ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, 100ಕ್ಕೂ ಅಧಿಕ ಆಟಗಾರರು ವಿವಿಧ ತಂಡಗಳ ಪಾಲಾಗಲಿದ್ದಾರೆ. ಕಳೆದ ಬಾರಿಯ ತಂಡದಲ್ಲಿದ್ದ ಕೆಲ ಆಟಗಾರರನ್ನು ಫ್ರಾಂಚೈಸಿಗಳು ರಿಟೈನ್ ಮಾಡಿಕೊಳ್ಳಲಿದ್ದು, ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಿವೆ. ಈ ಬಾರಿಯೂ ಮಯಾಂಕ್ ಅಗರ್‌ವಾಲ್, ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ವೈಶಾಖ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಪ್ರಮುಖರು ಕಣಕ್ಕಿಳಿಯುವ ನಿರೀಕ್ಷೆಯಿದೆ.