ಆಸೀಸ್‌ ವಿರುದ್ಧ ಪಂದ್ಯದಲ್ಲಿ ಸಿಡಿದ ರೋಹಿತ್‌: ಹಲವು ದಾಖಲೆಗಳು ಪುಡಿಪುಡಿ

| Published : Jun 25 2024, 12:31 AM IST / Updated: Jun 25 2024, 04:17 AM IST

ಆಸೀಸ್‌ ವಿರುದ್ಧ ಪಂದ್ಯದಲ್ಲಿ ಸಿಡಿದ ರೋಹಿತ್‌: ಹಲವು ದಾಖಲೆಗಳು ಪುಡಿಪುಡಿ
Share this Article
  • FB
  • TW
  • Linkdin
  • Email

ಸಾರಾಂಶ

ರೋಹಿತ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ ಸಿಡಿಸಿದ ಮೊದಲ ಬ್ಯಾಟರ್‌ ಎನ್ನುವ ದಾಖಲೆ ಬರೆದಿದ್ದಾರೆ. ಅಂ.ರಾ. ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ ಬಾರಿಸಿರುವ ಏಕೈಕ ಕ್ರಿಕೆಟಿಗ ಎನ್ನುವ ದಾಖಲೆಯೂ ರೋಹಿತ್‌ರ ಹೆಸರಿನಲ್ಲಿದೆ.

ಗ್ರಾಸ್‌ ಐಲೆಟ್‌: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಸಿಡಿಸಿದ ವಿಶ್ವದ ಮೊದಲ ಬ್ಯಾಟರ್‌ ಎನ್ನುವ ದಾಖಲೆಯನ್ನು ಭಾರತದ ನಾಯಕ ರೋಹಿತ್‌ ಶರ್ಮಾ ಬರೆದಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧ ಸೋಮವಾರ ನಡೆದ ಟಿ20 ವಿಶ್ವಕಪ್‌ನ ಸೂಪರ್‌-8 ಪಂದ್ಯದಲ್ಲಿ ರೋಹಿತ್‌ ಈ ಮೈಲಿಗಲ್ಲು ತಲುಪಿದರು. ಪ್ಯಾಟ್‌ ಕಮಿನ್ಸ್‌ರ ಎಸೆತವನ್ನು ಆಕರ್ಷಕ ರೀತಿಯಲ್ಲಿ ಸಿಕ್ಸರ್‌ಗಟ್ಟಿದ ರೋಹಿತ್‌, 200 ಸಿಕ್ಸರ್‌ಗಳನ್ನು ಪೂರೈಸಿದರು. ಆಸೀಸ್‌ ವಿರುದ್ಧ ಅವರ ಇನ್ನಿಂಗ್ಸಲ್ಲಿ ಬರೋಬ್ಬರಿ 8 ಸಿಕ್ಸರ್‌ಗಳಿದ್ದವು. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ ಬಾರಿಸಿರುವ ಏಕೈಕ ಕ್ರಿಕೆಟಿಗ ಎನ್ನುವ ದಾಖಲೆಯೂ ರೋಹಿತ್‌ರ ಹೆಸರಿನಲ್ಲಿದೆ.

01ನೇ ಬ್ಯಾಟರ್‌: ಟಿ20 ಪಂದ್ಯದ ಪವರ್‌-ಪ್ಲೇ (ಮೊದಲ 6 ಓವರ್‌)ನಲ್ಲಿ 5 ಸಿಕ್ಸರ್‌ ಸಿಡಿಸಿದ ಭಾರತದ ಮೊದಲ ಆಟಗಾರ ರೋಹಿತ್‌.

19 ಎಸೆತ: ಟಿ20 ವಿಶ್ವಕಪ್‌ನಲ್ಲಿ ಆಸೀಸ್‌ ವಿರುದ್ಧ ಅತಿವೇಗದ ಫಿಫ್ಟಿ ಬಾರಿಸಿದ ಆಟಗಾರ ರೋಹಿತ್‌ (19 ಎಸೆತ). ಯುವಿ 20 ಎಸೆತ, ಗೇಲ್‌ 23 ಎಸೆತದಲ್ಲಿ ಫಿಫ್ಟಿ ಬಾರಿಸಿದ್ದರು.

29 ರನ್‌: ಸ್ಟಾರ್ಕ್‌ ಎಸೆದ ಇನ್ನಿಂಗ್ಸ್‌ನ 3ನೇ ಓವರಲ್ಲಿ ಭಾರತ 29 ರನ್‌ ಕಲೆಹಾಕಿತು. ಇದು ಅಂ.ರಾ. ಕ್ರಿಕೆಟ್‌ನಲ್ಲಿ ಸ್ಟಾರ್ಕ್‌ ಒಂದು ಓವರಲ್ಲಿ ಚಚ್ಚಿಸಿಕೊಂಡ ಗರಿಷ್ಠ ರನ್‌.

ಪವರ್‌-ಪ್ಲೇನಲ್ಲೇ 51 ರನ್‌: ವಿಶ್ವಕಪ್‌ನಲ್ಲಿ 3ನೇ ಗರಿಷ್ಠ

ರೋಹಿತ್‌ ಶರ್ಮಾ ಪವರ್‌-ಪ್ಲೇನಲ್ಲಿ 21 ಎಸೆತಗಳಲ್ಲಿ 51 ರನ್‌ ಸಿಡಿಸಿದರು. ಇದು ಪುರುಷರ ಟಿ20 ವಿಶ್ವಕಪ್‌ನಲ್ಲಿ 3ನೇ ಗರಿಷ್ಠ. 2014ರಲ್ಲಿ ನೆದರ್‌ಲೆಂಡ್ಸ್‌ನ ಸ್ಟೀಫನ್‌ ಮೈಬರ್ಗ್‌ ಐರ್ಲೆಂಡ್‌ ವಿರುದ್ಧ 21 ಎಸೆತಗಳಲ್ಲಿ 57 ರನ್‌ ಸಿಡಿಸಿದ್ದು ಈಗಲೂ ದಾಖಲೆಯಾಗಿಯೇ ಉಳಿದಿದೆ. 2022ರಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶದ ಲಿಟನ್‌ ದಾಸ್‌ 24 ಎಸೆತಗಳಲ್ಲಿ 56 ರನ್‌ ಬಾರಿಸಿದ್ದರು. 2021ರಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಕೆ.ಎಲ್‌.ರಾಹುಲ್‌ 19 ಎಸೆತಗಳಲ್ಲಿ 50 ರನ್‌ ಸಿಡಿಸಿದ್ದು, ಪಟ್ಟಿಯಲ್ಲಿ 4ನೇ ಸ್ಥಾನದದಲ್ಲಿದ್ದಾರೆ.

8.4 ಓವರ್‌ನಲ್ಲೇ 100 ರನ್‌: ಭಾರತ ದಾಖಲೆ

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಕೇವಲ 8.4 ಓವರ್‌ಗಳಲ್ಲೇ 100 ರನ್‌ ಪೂರ್ಣಗೊಳಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತದ ಅತಿ ವೇಗದ 100 ರನ್‌. 2007ರಲ್ಲಿ ನ್ಯೂಜಿಲೆಂಡ್‌ ವಿರುದ್ಧ 10.2 ಓವರ್‌ಗಳಲ್ಲಿ 100 ಹೊಡೆದಿದ್ದು ಈ ಹಿಂದಿನ ದಾಖಲೆ.

ಟಿ20 ವಿಶ್ವಕಪ್‌ನಲ್ಲಿ ಭಾರತ ಬ್ಯಾಟರ್‌ನ 2ನೇ ಗರಿಷ್ಠ ರನ್

ರೋಹಿತ್‌ ಶರ್ಮಾ ಗಳಿಸಿದ 92 ರನ್‌ ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟರ್‌ನ 2ನೇ ಗರಿಷ್ಠ ರನ್‌. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸುರೇಶ್‌ ರೈನಾ 102 ರನ್‌ ಗಳಿಸಿದ್ದರು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟರ್‌ನಿಂದ ದಾಖಲಾದ ಏಕೈಕ ಶತಕ.

ಟಿ20 ವಿಶ್ವಕಪ್‌ ಇನ್ನಿಂಗ್ಸಲ್ಲಿ ಗರಿಷ್ಠ ಸಿಕ್ಸರ್‌ ದಾಖಲೆ

ಆಸೀಸ್‌ ವಿರುದ್ಧದ ಪಂದ್ಯದಲ್ಲಿ ರೋಹಿತ್‌ 8 ಸಿಕ್ಸರ್‌ ಸಿಡಿಸಿದರು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟರ್‌ಗಳ ಪೈಕಿ ಗರಿಷ್ಠ. 2007ರಲ್ಲಿ ಇಂಗ್ಲೆಂಡ್‌ ವಿರುದ್ಧ ಯುವರಾಜ್‌ ಸಿಂಗ್‌ 7 ಸಿಕ್ಸರ್‌ ಬಾರಿಸಿದ್ದು ಈ ವರೆಗಿನ ದಾಖಲೆಯಾಗಿತ್ತು. 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ಕ್ರಿಸ್‌ ಗೇಲ್‌ 11 ಸಿಕ್ಸರ್‌ ಬಾರಿಸಿದ್ದು ಒಟ್ಟಾರೆ ಗರಿಷ್ಠ ಎನಿಸಿದೆ.

ಅಂ.ರಾ. ಕ್ರಿಕೆಟ್‌ನಲ್ಲಿ 19000 ರನ್‌ ಮೈಲುಗಲ್ಲು

ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19,000 ಪೂರ್ಣಗೊಳಿಸಿದ್ದು, ಈ ಸಾಧನೆ ಮಾಡಿದ 4ನೇ ಭಾರತೀಯ ಎನಿಸಿದರು. ಸಚಿನ್‌, ವಿರಾಟ್‌ ಕೊಹ್ಲಿ, ರಾಹುಲ್‌ ದ್ರಾವಿಡ್‌ ಇತರ ಸಾಧಕರು. ಒಟ್ಟಾರೆ ವಿಶ್ವ ಕ್ರಿಕೆಟ್‌ನಲ್ಲಿ 19000 ರನ್‌ ಕಲೆಹಾಕಿದ 15ನೇ ಬ್ಯಾಟರ್‌ ರೋಹಿತ್‌.

ಆಸ್ಟ್ರೇಲಿಯಾ ವಿರುದ್ಧ 132 ಸಿಕ್ಸರ್‌: ದಾಖಲೆ

ರೋಹಿತ್‌ ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 132 ಸಿಕ್ಸರ್‌ ಬಾರಿಸಿದ್ದಾರೆ. ಇದು ತಂಡವೊಂದರ ವಿರುದ್ಧ ಆಟಗಾರನೊಬ್ಬನ ಗರಿಷ್ಠ. ಕ್ರಿಸ್‌ ಗೇಲ್‌ ಇಂಗ್ಲೆಂಡ್‌ ವಿರುದ್ಧ 130 ಸಿಕ್ಸರ್‌ ಬಾರಿಸಿದ್ದಾರೆ.19 ಎಸೆತ: ರೋಹಿತ್‌ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಈ ಬಾರಿ ವಿಶ್ವಕಪ್‌ನಲ್ಲಿ ಅತಿ ವೇಗದ ಫಿಫ್ಟಿ.