ಐಪಿಎಲ್‌ ಹೀರೊಗಳಿಗೆ ಬಿಸಿ ಮುಟ್ಟಿಸಿದ ಜಿಂಬಾಬ್ವೆ

| Published : Jul 07 2024, 01:18 AM IST / Updated: Jul 07 2024, 05:02 AM IST

ಸಾರಾಂಶ

ಮೊದಲ ಟಿ20 ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಭಾರತಕ್ಕೆ 13 ರನ್‌ ಆಘಾತಕಾರಿ ಸೋಲು. 5 ಪಂದ್ಯಗಳ ಸರಣಿಯಲ್ಲಿ ಜಿಂಬಾಬ್ವೆ 1-0 ಲೀಡ್‌. ಶುಭ್‌ಮನ್‌ ಪಡೆ ಬಿಗು ದಾಳಿ, ಜಿಂಬಾಬ್ವೆ 9 ವಿಕೆಟ್‌ಗೆ 115 ರನ್‌. ಆತಿಥೇಯರ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 102 ರನ್‌ಗೆ ಸರ್ವಪತನ.

ಹರಾರೆ: ಟಿ20 ವಿಶ್ವಕಪ್‌ ಗೆಲುವಿನ ಬಳಿಕ ತಾನಾಡಿದ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಆಘಾತಕಾರಿ ಸೋಲನುಭವಿಸಿದೆ. 2026ರ ಟಿ20 ವಿಶ್ವಕಪ್‌ಗೆ ಆಡಿಷನ್‌ ಎಂಬಂತೆ ಯುವ ತಾರೆಗಳೊಂದಿಗೆ ಕಣಕ್ಕಿಳಿದಿದ್ದ ಭಾರತ ತಂಡ, ಜಿಂಬಾಬ್ವೆ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 13 ರನ್‌ಗಳಿಂದ ಪರಾಭವಗೊಂಡಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆತಿಥೇಯ ಜಿಂಬಾಬ್ವೆ 1-0 ಮುನ್ನಡೆ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ ಉತ್ತಮ ಅರಂಭದ ಹೊರತಾಗಿಯೂ 9 ವಿಕೆಟ್‌ಗೆ 115 ರನ್‌ ಗಳಿಸಿತು. ಐಪಿಎಲ್‌ ಹಾಗೂ ದೇಸಿ ಕ್ರಿಕೆಟ್‌ನಲ್ಲಿ ಆರ್ಭಟಿಸಿದ್ದ ಯುವ ಬ್ಯಾಟರ್‌ಗಳಿದ್ದ ಭಾರತ ತಂಡಕ್ಕೆ ಈ ಗುರಿ ತುಂಬಾ ಸಣ್ಣದು. ಆದರೆ ಜಿಂಬಾಬ್ವೆ ದಾಳಿಗೆ ಶುಭ್‌ಮನ್‌ ಗಿಲ್‌ ಬಳಕ ಅಕ್ಷರಶಃ ತತ್ತರಿಸಿತು. 19.5 ಓವರ್‌ಗಳಲ್ಲಿ 102 ರನ್‌ಗೆ ಆಲೌಟಾಯಿತು.

ಮೊದಲ ಓವರ್‌ನಲ್ಲೇ ಅಭಿಷೇಕ್‌ ಶರ್ಮಾ ಸೊನ್ನೆಗೆ ಔಟಾಗುವುದರೊಂದಿಗೆ ಭಾರತದ ಪತನ ಆರಂಭಗೊಂಡಿತು. ಬಳಿಕ ಬಂದ ಋತುರಾಜ್‌ ಗಾಯಕ್ವಾಡ್‌ 7, ರಿಯಾನ್‌ ಪರಾಗ್‌ 2, ರಿಂಕು ಸಿಂಗ್‌ ಸೊನ್ನೆಗೆ ನಿರ್ಗಮಿಸಿದಾಗಲೇ ಭಾರತಕ್ಕೆ ಸೋಲಿನ ಮುನ್ಸೂಚನೆ ಸಿಕ್ಕಿತ್ತು. 22ಕ್ಕೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಶುಭ್‌ಮನ್‌ ಗಿಲ್‌(29 ಎಸೆತಗಳಲ್ಲಿ 31) ಆಸರೆಯಾದರೂ, ದೊಡ್ಡ ಇನ್ನಿಂಗ್ಸ್‌ ಕಟ್ಟಲು ಅವರಿಂದಲೂ ಸಾಧ್ಯವಾಗಲಿಲ್ಲ.

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ ವಾಷಿಂಗ್ಟನ್‌ ಸುಂದರ್‌(27) ಭಾರತದ ಗೆಲುವಿನ ಆಸೆಯನ್ನು ಚಿಗುರಿಸಿದ್ದರು. ಆದರೆ ಆವೇಶ್‌ ಖಾನ್‌(12 ಎಸೆತದಲ್ಲಿ 16) ಹೊರತುಪಡಿಸಿ ಇತರರ ಬೆಂಬಲ ಸಿಗದ ಕಾರಣ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ನಾಯಕ ಸಿಕಂದರ್‌ ರಝಾ 3, ಟೆಂಡಯ್‌ ಚಟಾರ 3 ವಿಕೆಟ್‌ ಕಿತ್ತರು.

ಸ್ಪಿನ್ನರ್‌ಗಳ ಕೈಚಳಕ: ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಜಿಂಬಾಬ್ವೆ ಉತ್ತಮ ಆರಂಭ ಪಡೆಯಿತು. 2ನೇ ಓವರಲ್ಲೇ ಇನೊಸೆಂಟ್‌ ವಿಕೆಟ್‌ ಕಳೆದುಕೊಂಡರೂ ತಂಡ 5 ಓವರಲ್ಲಿ 40 ರನ್‌ ಗಳಿಸಿತ್ತು. ಆದರೆ ಬ್ರಿಯಾನ್‌ ಬೆನೆಟ್‌(22) ವಿಕೆಟ್ ಕಿತ್ತ ರವಿ ಬಿಷ್ಣೋಯ್‌, ಜಿಂಬಾಬ್ವೆ ಕುಸಿತಕ್ಕೆ ನಾಂದಿ ಹಾಡಿದರು.74ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ 16 ರನ್‌ ಸೇರಿಸುವಷ್ಟರಲ್ಲಿ ಗಂಟುಮೂಟೆ ಕಟ್ಟಿತು. 

ಮಧೆವೆರೆ 21, ಸಿಕಂದರ್‌ 17, ಡಿಯಾನ್‌ ಮೈರ್ಸ್‌ 23, ಕ್ಲೈವ್‌ ಮಡಂಡೆ ಔಟಾಗದೆ 29 ರನ್‌ ಗಳಿಸಿ ತಂಡವನ್ನು 100ರ ಗಡಿ ದಾಟಿಸಿದರು. ಬಿಷ್ಣೋಯ್‌ 4 ಓವರಲ್ಲಿ 2 ಮೇಡಿನ್‌ ಸಹಿತ 13 ರನ್‌ಗೆ 4 ವಿಕೆಟ್‌ ಪಡೆದರು.ಸ್ಕೋರ್: ಜಿಂಬಾಬ್ವೆ 20 ಓವರಲ್ಲಿ 115/9 (ಕ್ಲೈವ್‌ 29, ಡಿಯಾನ್‌ 23, ಬಿಷ್ಣೋಯ್‌ 4-13, ವಾಷಿಂಗ್ಟನ್‌ 2-11), ಭಾರತ 19.5 ಓವರಲ್ಲಿ 102/10 (ಶುಭ್‌ಮನ್‌ 31, ವಾಷಿಂಗ್ಟನ್‌ 27, ಟೆಂಡಯ್‌ 3-16, ಸಿಕಂದರ್‌ 3-25)

ಪಂದ್ಯಶ್ರೇಷ್ಠ: ಸಿಕಂದರ್ ರಝಾ

ಭಾರತ 8 ವರ್ಷದಲ್ಲೇ ಕನಿಷ್ಠ ಮೊತ್ತಕ್ಕೆ ಆಲೌಟ್‌

ಜಿಂಬಾಬ್ವೆ ವಿರುದ್ಧ ಭಾರತ 102ಕ್ಕೆ ಆಲೌಟಾಯಿತು. ಇದು ಟಿ20 ಕ್ರಿಕೆಟ್‌ನಲ್ಲಿ ಕಳೆದ 8 ವರ್ಷಗಳಲ್ಲಿ ಭಾರತ ಕನಿಷ್ಠ ಆಲೌಟ್‌ ಮೊತ್ತ. 2016ರಲ್ಲಿ ಶ್ರೀಲಂಕಾ ವಿರುದ್ಧ ಪುಣೆಯಲ್ಲಿ ಭಾರತ 101 ರನ್‌ಗೆ ಆಲೌಟಾಗಿತ್ತು.

116 ರನ್‌: ಭಾರತ ವಿರುದ್ಧ ಟಿ20ಯಲ್ಲಿ ಕನಿಷ್ಠ ಮೊತ್ತ(116) ರಕ್ಷಿಸಿ ಗೆದ್ದ ಖ್ಯಾತಿಯನ್ನು ಜಿಂಬಾಬ್ವೆ ಗಳಿಸಿತು. 2016ರಲ್ಲಿ ನ್ಯೂಜಿಲೆಂಡ್‌ ತಂಡ ಭಾರತ ವಿರುದ್ಧ 127 ರನ್ ರಕ್ಷಿಸಿ ಗೆದ್ದಿದ್ದು ಈ ವರೆಗಿನ ದಾಖಲೆ.

ಈ ವರ್ಷ ಭಾರತಕ್ಕೆ ಮೊದಲ ಟಿ20 ಸೋಲು

ಭಾರತ ತಂಡ 2024ರಲ್ಲಿ ಮೊದಲ ಬಾರಿ ಟಿ20 ಪಂದ್ಯದಲ್ಲಿ ಸೋಲನುಭವಿಸಿತು. ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಗೆದ್ದಿದ್ದ ಭಾರತ, ಬಳಿಕ ಟಿ20 ವಿಶ್ವಕಪ್‌ನಲ್ಲಿ 8 ಪಂದ್ಯಗಳಲ್ಲಿ ಜಯಗಳಿಸಿತ್ತು.

ಭಾರತದ 12 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್‌

ಈ ಸೋಲಿನೊಂದಿಗೆ ಭಾರತದ ಸತತ 12 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್‌ ಬಿತ್ತು. ಈ ಪಂದ್ಯದಲ್ಲಿ ಗೆದ್ದಿದ್ದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯ ಮಲೇಷ್ಯಾ(13)ದ ದಾಖಲೆಯನ್ನು ಭಾರತ ಸರಿಗಟ್ಟುತ್ತಿತ್ತು.

ರಿಯಾನ್‌, ಅಭಿಷೇಕ್‌, ಜುರೆಲ್‌ ಪಾದಾರ್ಪಣೆ

ಈ ಪಂದ್ಯದ ಮೂಲಕ ಮೂವರು ಕ್ರಿಕೆಟಿಗರು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅಭಿಷೇಕ್‌ ಶರ್ಮಾ, ರಿಯಾನ್‌ ಪರಾಗ್‌ ಹಾಗೂ ಧ್ರುವ್‌ ಜುರೆಲ್‌ ಮೊದಲ ಬಾರಿ ದೇಶದ ಪರ ಟಿ20 ಆಡುವ ಅವಕಾಶ ಗಿಟ್ಟಿಸಿಕೊಂಡರು. ರಿಯಾನ್‌ ಪರಾಗ್‌ ತಮ್ಮ ತಂದೆ, ಮಾಜಿ ರಣಜಿ ಕ್ರಿಕೆಟಿಗ ಪರಾಗ್‌ ದಾಸ್‌ರಿಂದ ಭಾರತ ತಂಡದ ಕ್ಯಾಪ್‌ ಸ್ವೀಕರಿಸಿದರು.