ಸಾರಾಂಶ
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡು ಪದಕ ವಂಚಿತರಾಗಿದ್ದ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಶನಿವಾರ ಭಾರತಕ್ಕೆ ಆಗಮಿಸಿದ್ದು, ಅಭಿಮಾನಿಗಳು, ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದ್ದಾರೆ.
ವಿನೇಶ್‌ರನ್ನು ಸ್ವಾಗತಿಸಲು ದೆಹಲಿ ವಿಮಾನ ನಿಲ್ದಾಣಕ್ಕೆ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ, ರೈತ ನಾಯಕರು ಸೇರಿ ನೂರಾರು ಮಂದಿ ಆಗಮಿಸಿದ್ದರು.
ಬಳಿಕ ವಿಮಾನ ನಿಲ್ದಾಣದಿಂದ ತಮ್ಮ ತವರೂರು ಹರ್ಯಾಣದ ಬಲಾಲಿಗೆ ವಿನೇಶ್‌ರನ್ನು ಕಾರ್ ರ್‍ಯಾಲಿ ಮೂಲಕ ಕರೆದೊಯ್ಯಲಾಯಿತು. ದಾರಿಯುದ್ದಕ್ಕೂ ತಮ್ಮ ಅಭಿಮಾನಿಗಳು, ಬೆಂಬಲಿಗರನ್ನು ಭೇಟಿಯಾದ ವಿನೇಶ್, ಇಡೀ ದೇಶಕ್ಕೆ ಧನ್ಯವಾದ ಎಂದು ಹೇಳಿದರು. ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.
ಹರ್‍ಯಾಣ ಚುನಾವಣಾ ರ್‍ಯಾಲಿ ಎಂದು ವ್ಯಂಗ್ಯ
ವಿನೇಶ್ ಜೊತೆ ಕಾರು ರ್‍ಯಾಲಿಯಲ್ಲಿ ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ ಕಾಣಿಸಿಕೊಂಡರು. ಜೊತೆಗೆ ಇನ್ನೂ ಕೆಲ ಕಾಂಗ್ರೆಸ್ ಕಾರ್ಯಕರ್ತರು ರ್‍ಯಾಲಿಯಲ್ಲಿದ್ದರು. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವು ಫೋಟೋ, ವಿಡಿಯೋ ಹಂಚಿಕೊಂಡಿದ್ದು, ಇದು ಹರ್ಯಾಣ ಚುನಾವಣಾ ರ್‍ಯಾಲಿ ಎಂದು ಟೀಕಿಸಿದ್ದಾರೆ.
ತಿರಂಗದ ಮೇಲೆ ಕಾಲಿಟ್ಟ ಬಜರಂಗ್: ಭಾರಿ ಆಕ್ರೊಶ
ರ್‍ಯಾಲಿ ವೇಳೆ ಕಾರಿನ ಬಾನೆಟ್ ಮೇಲಿನ ತ್ರಿವರ್ಣ ಧ್ವಜವಿದ್ದ ಬ್ಯಾನರ್‌ಗೆ ಬಜರಂಗ್ ಪೂನಿಯಾ ಕಾಲಿಟ್ಟಿದ್ದಾರೆ. ಕಾರಿನ ಸುತ್ತಲೂ ನೆರೆದಿದ್ದ ಜನರನ್ನು ತೆರವುಗೊಳಿಸಲು ಬಜರಂಗ್ ಪ್ರಯತ್ನಿಸುವಾಗ ಅವರು ತ್ರಿವರ್ಣ ಧ್ವಜದ ಮೇಲೆ ನಡೆದಾಡಿದ್ದಾರೆ. ಬಜರಂಗ್ ಭಾರತದ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಹಲವರು ಸಾಮಾಜಿಕ ತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.