ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ವಿನೇಶ್‌ ಫೋಗಟ್‌

| Published : Apr 21 2024, 02:20 AM IST / Updated: Apr 21 2024, 04:12 AM IST

ಸಾರಾಂಶ

ಪ್ಯಾರಿಸ್‌ಗೆ ಹೋಗಲಿದ್ದಾರೆ ವಿನೇಶ್‌ ಫೋಗಟ್‌. 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ತಾರಾ ಕುಸ್ತಿಪಟು. ಬಿಷ್ಕೆಕ್‌ನಲ್ಲಿ ನಡೆದ ಏಷ್ಯಾ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ನಿರಾಯಾಸವಾಗಿ ಗೆದ್ದ ವಿನೇಶ್‌.

ಬಿಷ್ಕೆಕ್‌ (ಕಿರ್ಗಿಸ್ತಾನ): ಭಾರತದ ತಾರಾ ಕುಸ್ತಿಪಟು ವಿನೇಶ್‌ ಫೋಗಟ್‌ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಇಲ್ಲಿ ನಡೆಯತ್ತಿರುವ ಏಷ್ಯಾ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯ ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಫೈನಲ್‌ ಪ್ರವೇಶಿಸುವ ಮೂಲಕ ಅರ್ಹತೆ ಗಿಟ್ಟಿಸಿಕೊಂಡರು. 

ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಪ್ರತಿಭಟನೆ ನಡೆಸಿ ಹಲವು ತಿಂಗಳುಗಳ ಕಾಲ ಕುಸ್ತಿ ಮ್ಯಾಟ್‌ನಿಂದ ದೂರವಿದ್ದ ವಿನೇಶ್‌, ಇತ್ತೀಚೆಗೆ ಭಾರತೀಯ ಕುಸ್ತಿ ಫೆಡರೇಶನ್‌ ನಡೆಸಿದ್ದ ಆಯ್ಕೆ ಟ್ರಯಲ್ಸ್‌ನಲ್ಲಿ ಮೊದಲ ಸ್ಥಾನ ಪಡೆದು ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ಆಯ್ಕೆಯಾಗಿದ್ದರು. ಇದೀಗ ವಿನೇಶ್‌ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡು, 3ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅಣಿಯಾಗಿದ್ದಾರೆ.

ವಿನೇಶ್‌ 2016ರ ರಿಯೋ, 2020ರ ಟೋಕಿಯೋ ಒಲಿಂಪಿಕ್ಸ್‌ಗಳಲ್ಲೂ ಸ್ಪರ್ಧಿಸಿದ್ದರು.57 ಕೆ.ಜಿ. ವಿಭಾಗದಲ್ಲಿ ಅನ್ಶು ಮಲಿಕ್‌, 76 ಕೆ.ಜಿ. ವಿಭಾಗದಲ್ಲಿ ರೀತಿಕಾ ಸಹ ಫೈನಲ್‌ ಪ್ರವೇಶಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. 

53 ಕೆ.ಜಿ. ವಿಭಾಗದಲ್ಲಿ ಅಂತಿಮ್‌ ಪಂಘಲ್‌ ಈ ಮೊದಲೇ ಅರ್ಹತೆ ಪಡೆದಿದ್ದರು. ಭಾರತೀಯ ಕುಸ್ತಿ ಫೆಡರೇಶನ್‌ ಈ ಅರ್ಹತೆಗಳನ್ನೇ ಅಂತಿಮಗೊಳಿಸುತ್ತದೆಯೋ ಅಥವಾ ಮತ್ತೊಂದು ಸುತ್ತಿನ ಆಯ್ಕೆ ಟ್ರಯಲ್ಸ್‌ ನಡೆಸಿ ಬಳಿಕ ಒಲಿಂಪಿಕ್ಸ್‌ಗೆ ತಂಡ ಕಳುಹಿಸುತ್ತದೆಯೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.