ಸಾರಾಂಶ
ಪ್ಯಾರಿಸ್: ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವಿನೇಶ್ ಫೋಗಟ್ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಜಾಗತಿಕ ಕ್ರೀಡಾ ಮೇಲ್ಮನವಿ ನ್ಯಾಯಾಲಯ(ಸಿಎಎಸ್) ಸ್ವೀಕರಿಸಿದೆ. ಶುಕ್ರವಾರ ಅರ್ಜಿ ವಿಚಾರಣೆ ಆರಂಭಗೊಳ್ಳಲಿದ್ದು, ಶೀಘ್ರದಲ್ಲೇ ತೀರ್ಪು ಹೊರಬೀಳುವ ನಿರೀಕ್ಷೆಯಿದೆ.ಅರ್ಜಿ ವಿಚಾರಣೆಗೆ ಪ್ಯಾರಿಸ್ ಬಾರ್ ಕೌನ್ಸಿಲ್‌ನ ನಾಲ್ವರು ವಕೀಲರು ಹಾಜರಾಗಲಿದ್ದಾರೆ. ವಿನೇಶ್‌ಗೂ ಕೂಡಾ ಓರ್ವ ವಕೀಲರನ್ನು ನೇಮಿಸಲು ಸಿಎಎಸ್ ಅವಕಾಶ ಕಲ್ಪಿಸಿದೆ ಎಂದು ತಿಳಿದುಬಂದಿದೆ. 50 ಕೆ.ಜಿ. ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದರೂ, ಪಂದ್ಯಕ್ಕೂ ಮುನ್ನ ತೂಕ ಹೆಚ್ಚಾಗಿದ್ದಕ್ಕೆ ವಿನೇಶ್‌ರನ್ನು ಅನರ್ಹಗೊಳಿಸಲಾಗಿತ್ತು. ಹೀಗಾಗಿ ತಮಗೆ ಬೆಳ್ಳಿ ಪದಕವಾದರೂ ನೀಡಬೇಕು ಎಂದು ವಿನೇಶ್ ಸಿಎಎಸ್‌ಗೆ ಮನವಿ ಮಾಡಿದ್ದಾರೆ.
ಬೆಳ್ಳಿ ವಿಜೇತರಂತೆ ವಿನೇಶ್‌ಗೂ ಸನ್ಮಾನ, ₹4 ಕೋಟಿ ಬಹುಮಾನ!
ಚಂಡೀಗಢ: ಒಲಿಂಪಿಕ್ಸ್ ಕುಸ್ತಿಯ 50 ಕೆ.ಜಿ. ವಿಭಾಗದಲ್ಲಿ ಫೈನಲ್ ತಲುಪಿ, ಚಿನ್ನದ ಪದಕದ ಪಂದ್ಯಕ್ಕೂ ಮುನ್ನ 100 ಗ್ರಾಂ ಅಧಿಕ ತೂಕ ಕಂಡುಬಂದಿದ್ದರಿಂದ ಒಲಿಂಪಿಕ್ಸ್‌ನಿಂದಲೇ ಅನರ್ಹಗೊಂಡಿದ್ದ ವಿನೇಶ್ ಫೋಗಟ್‌ರನ್ನು ಪದಕ ವಿಜೇತರ ರೀತಿಯಲ್ಲೇ ಹರ್ಯಾಣ ಸರ್ಕಾರ ಸನ್ಮಾನಿಸಲಿದೆ ಎಂದು ಸಿಎಂ ನಯಾಬ್ ಸಿಂಗ್ ಸೈನಿ ಹೇಳಿದರು.ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಹರ್ಯಾಣದ ಹೆಮ್ಮೆಯ ಮಗಳು ವಿನೇಶ್ ಪದಕ ಗೆಲ್ಲದೇ ಇರಬಹುದು.
ಆದರೆ ಅವರು ನಮಗೆ ಚಾಂಪಿಯನ್. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತರಿಗೆ ರಾಜ್ಯ ಸರ್ಕಾರ ನೀಡಲಿರುವ ಎಲ್ಲಾ ಗೌರವ, ಬಹುಮಾನವನ್ನು ವಿನೇಶ್‌ಗೂ ನೀಡಲಾಗುವುದು’ ಎಂದಿದ್ದಾರೆ. ಹರ್ಯಾಣ ಸರ್ಕಾರ, ಒಲಿಂಪಿಕ್ಸ್ ಚಿನ್ನ ವಿಜೇತರಿಗೆ ₹6 ಕೋಟಿ, ಬೆಳ್ಳಿ ವಿಜೇತರಿಗೆ ₹4 ಕೋಟಿ ಹಾಗೂ ಕಂಚಿನ ಪದಕ ವಿಜೇತರಿಗೆ ₹2.5 ಕೋಟಿ ನೀಡಲಿದೆ ಎಂದು ಈ ಮೊದಲೇ ಘೋಷಿಸಿತ್ತು.