12 ವರ್ಷಗಳ ಬಳಿಕ ಇಂದು ರಣಜಿ ಪಂದ್ಯದಲ್ಲಿ ದಿಗ್ಗಜ ಕ್ರಿಕೆಟಿಗ ಕಣಕ್ಕೆ. ದೆಹಲಿ ತಂಡದಲ್ಲಿ ಆಡಲಿರುವ ವಿರಾಟ್ ಕೊಹ್ಲಿ. ರೈಲ್ವೇಸ್ ವಿರುದ್ಧ ಪಂದ್ಯ. ಅಭಿಮಾನಿಗಳಲ್ಲಿ ಭಾರೀ ಕುತೂಹಲ.
ನವದೆಹಲಿ: ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ 12 ವರ್ಷಗಳ ಬಳಿಕ ರಣಜಿ ಟ್ರೋಫಿ ಪಂದ್ಯವಾಡಲು ಸಜ್ಜಾಗಿದ್ದಾರೆ. ಗುರುವಾರದಿಂದ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಆಡಲಿರುವ ವಿರಾಟ್, ಕ್ರಿಕೆಟ್ ಅಭಿಮಾನಿಗಳ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.
‘ಡಿ’ ಗುಂಪಿನಲ್ಲಿರುವ ದೆಹಲಿ ತಂಡ ಕ್ವಾರ್ಟರ್ ಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದರೂ, ಕೊಹ್ಲಿ ಆಡಲಿದ್ದಾರೆ ಎನ್ನುವ ಕಾರಣಕ್ಕೆ ಈ ಪಂದ್ಯದ ಬಗ್ಗೆ ಭಾರಿ ಕುತೂಹಲ ಮೂಡಿದೆ. ಈ ಋತುವನ್ನು ಭರ್ಜರಿಯಾಗಿ ಮುಕ್ತಾಯಗೊಳಿಸಲು ದೆಹಲಿ ಎದುರು ನೋಡುತ್ತಿದೆ.
ವಿರಾಟ್ ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ಕೊಹ್ಲಿಗಾಗಿ ನಾಯಕ ಆಯುಷ್ ಬದೋನಿ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬಿಟ್ಟುಕೊಟ್ಟಿದ್ದಾರೆ. ದೊಡ್ಡ ಸ್ಕೋರ್ ಗಳಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ನಡೆಸಲು ಕೊಹ್ಲಿ ಕಾತರರಾಗಿದ್ದಾರೆ.
ಕೊಹ್ಲಿಯ ಆಟ ನೋಡಲು ಅಂದಾಜು 10000 ಪ್ರೇಕ್ಷಕರು ಆಗಮಿಸಬಹುದು ಎಂದು ನಿರೀಕ್ಷೆ ಮಾಡುತ್ತಿರುವ ದೆಹಲಿ ಕ್ರಿಕೆಟ್ ಸಂಸ್ಥೆ, ಹೆಚ್ಚುವರಿ ಭದ್ರತೆ ವ್ಯವಸ್ಥೆ ಮಾಡಿದೆ.
