ಸಾರಾಂಶ
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಹೊಸ ದಾಖಲೆ. 8000 ರನ್ ಮೈಲುಗಲ್ಲು ತಲುಪಿದ ಮೊದಲ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದ ವಿರಾಟ್.
ಅಹಮದಾಬಾದ್: ರನ್ ಮೆಷಿನ್ ಖ್ಯಾತಿಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಅವರು ಐಪಿಎಲ್ ಇತಿಹಾಸದಲ್ಲೇ 8000 ರನ್ ಪೂರ್ಣಗೊಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬುಧವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 29 ರನ್ ಗಳಿಸಿದಾಗ ಕೊಹ್ಲಿ ಈ ಮಹತ್ವದ ಮೈಲುಗಲ್ಲು ತಲುಪಿದರು. ಪಂದ್ಯದಲ್ಲಿ 24 ಎಸೆತಗಳಲ್ಲಿ 33 ರನ್ ಸಿಡಿಸಿ ಔಟಾದ ಕೊಹ್ಲಿ, ಈ ಬಾರಿ ಐಪಿಎಲ್‌ನ ರನ್ ಗಳಿಕೆಯನ್ನು 741ಕ್ಕೆ ಹೆಚ್ಚಿಸಿದರು. ಒಟ್ಟಾರೆ ಐಪಿಎಲ್‌ನಲ್ಲಿ ಅವರ ರನ್ ಸದ್ಯ 8004.
2008ರ ಚೊಚ್ಚಲ ಆವೃತ್ತಿಯಿಂದಲೂ ಆರ್‌ಸಿಬಿಯನ್ನು ಪ್ರತಿನಿಧಿಸುತ್ತಿರುವ ವಿರಾಟ್ ಈ ವರೆಗೂ 252 ಪಂದ್ಯಗಳನ್ನು ಆಡಿದ್ದಾರೆ. 38.66ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಅವರ ಸ್ಟ್ರೈಕ್‌ರೇಟ್ 131.97. ಅವರು ಐಪಿಎಲ್‌ನಲ್ಲಿ 8 ಶತಕ, 55 ಅರ್ಧಶತಕ ಸಿಡಿಸಿದ್ದಾರೆ.
ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಶಿಖರ್ ಧವನ್ 2ನೇ ಸ್ಥಾನದಲ್ಲಿದ್ದಾರೆ. ಸದ್ಯ ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಧವನ್ 222 ಪಂದ್ಯಗಳಲ್ಲಿ 6769 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ(6628), ಡೇವಿಡ್ ವಾರ್ನರ್(6565) ಹಾಗೂ ಸುರೇಶ್ ರೈನಾ(5528) ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿದ್ದಾರೆ.-ಐಪಿಎಲ್‌ನಲ್ಲಿ ಕೊಹ್ಲಿ ಸಾಧನೆ
252 ಪಂದ್ಯ
8004 ರನ್
08 ಶತಕ
55 ಫಿಫ್ಟಿ