ಆರ್‌ಸಿಬಿ ಪರ 250 ಪಂದ್ಯವಾಡಿದ ಕೊಹ್ಲಿ: ಐಪಿಎಲ್‌ನಲ್ಲಿ ಹೊಸ ರೆಕಾರ್ಡ್‌!

| Published : May 13 2024, 12:05 AM IST / Updated: May 13 2024, 04:16 AM IST

ಸಾರಾಂಶ

ವಿರಾಟ್‌ ಕೊಹ್ಲಿಯಿಂದ ಮತ್ತೊಂದು ಹೊಸ ದಾಖಲೆ. ಐಪಿಎಲ್‌ನಲ್ಲಿ ಒಂದು ತಂಡದ ಪರ 250 ಪಂದ್ಯಗಳನ್ನಾಡಿದ ಮೊದಲ ಆಟಗಾರ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮೈಲಿಗಲ್ಲು.

 ಬೆಂಗಳೂರು :  ‘ಕಿಂಗ್‌’ ಖ್ಯಾತಿಯ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಅವರು ಆರ್‌ಸಿಬಿ ಪರ 250ನೇ ಪಂದ್ಯವಾಡಿದ್ದು, ಐಪಿಎಲ್‌ನಲ್ಲಿ ಒಂದೇ ತಂಡದ ಪರ 250+ ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2008ರ ಚೊಚ್ಚಲ ಆವೃತ್ತಿಯಿಂದಲೂ ಕೊಹ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸುತ್ತಿದ್ದಾರೆ. ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕಣಕ್ಕಿಳಿಯುವ ಮೂಲಕ 250 ಪಂದ್ಯಗಳನ್ನು ಪೂರೈಸಿದರು. ಪಂದ್ಯದಲ್ಲಿ ಅವರು 13 ಎಸೆತಗಳಲ್ಲಿ 27 ರನ್‌ ಸಿಡಿಸಿ ಔಟಾದರು. ಕೊಹ್ಲಿ ಐಪಿಎಲ್‌ನಲ್ಲಿ ಈ ವರೆಗೆ 38.65ರ ಸರಾಸರಿಯಲ್ಲಿ 7924 ರನ್‌ ಕಲೆಹಾಕಿದ್ದಾರೆ. ಇದರಲ್ಲಿ 8 ಶತಕ, 55 ಅರ್ಧಶತಕಗಳೂ ಒಳಗೊಂಡಿವೆ.

ಇನ್ನು, ಕೊಹ್ಲಿ ಐಪಿಎಲ್‌ನಲ್ಲಿ 250+ ಪಂದ್ಯಗಳನ್ನಾಡಿದ ಕೇವಲ 4ನೇ ಆಟಗಾರ. ಚೆನ್ನೈ ಮಾಜಿ ನಾಯಕ ಎಂ.ಎಸ್‌.ಧೋನಿ(263) ಐಪಿಎಲ್‌ನಲ್ಲಿ ಗರಿಷ್ಠ ಪಂದ್ಯಗಳನ್ನಾಡಿರುವ ದಾಖಲೆ ಹೊಂದಿದ್ದಾರೆ. ಮುಂಬೈ ಮಾಜಿ ನಾಯಕ ರೋಹಿತ್‌ ಶರ್ಮಾ(256), ಸದ್ಯ ಆರ್‌ಸಿಬಿಯಲ್ಲಿರುವ ದಿನೇಶ್‌ ಕಾರ್ತಿಕ್‌(255) ಕೂಡಾ 250ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದಾರೆ.