ಸಾರಾಂಶ
ಹೈದರಾಬಾದ್: ವಿರಾಟ್ ಕೊಹ್ಲಿಯ ಅಭಿಮಾನಿಯೊಬ್ಬ ತಮ್ಮ ನೆಚ್ಚಿನ ಆಟಗಾರ ಇನ್ನಷ್ಟು ಯಶಸ್ಸು ಕಾಣಲಿ ಎಂದು ಇಲ್ಲಿನ ಸಾಯಿ ಬಾಬಾ ದೇಗುಲವೊಂದಕ್ಕೆ 708 ರು. ಕಾಣಿಕೆ ನೀಡಿದ್ದಾರೆ.
ಕೊಹ್ಲಿ ಈ ಆವೃತ್ತಿಯ ಐಪಿಎಲ್‌ನಲ್ಲಿ 708 ರನ್ ಗಳಿಸಿರುವ ಹಿನ್ನೆಲೆಯಲ್ಲಿ ಅಷ್ಟೇ ಮೊತ್ತವನ್ನು ಕಾಣಿಕೆ ನೀಡಿದ್ದು, ಟ್ವೀಟ್ ಮೂಲಕ ಕೊಹ್ಲಿ ಹಾಗೂ ಅವರ ಅಭಿಮಾನಿಗಳಿಗೆ ವಿಷಯ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ.
ನಿಮ್ಮ ಯಶಸ್ಸಿಗಾಗಿ ದೇವರ ಮೊರೆ ಹೋಗಿದ್ದೇನೆ. ಭಾರತ ಟಿ20 ವಿಶ್ವಕಪ್, ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಅಭಿಮಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಅವರ ಟ್ವೀಟ್ ವೈರಲ್ ಆಗಿದೆ.
700+ ರನ್: ಗೇಲ್ ದಾಖಲೆ ಸರಿಗಟ್ಟಿದ ಕೊಹ್ಲಿ
ಐಪಿಎಲ್ ಆವೃತ್ತಿಯೊಂದರಲ್ಲಿ ವಿರಾಟ್ ಕೊಹ್ಲಿ 2ನೇ ಬಾರಿಗೆ 700ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರೊಂದಿಗೆ ಕ್ರಿಸ್ ಗೇಲ್‌ರ ದಾಖಲೆಯನ್ನು ಸರಿಗಟ್ಟಿದ್ದಾರೆ. 2016ರಲ್ಲಿ ದಾಖಲೆಯ 973 ರನ್ ಕಲೆಹಾಕಿದ್ದ ಕೊಹ್ಲಿ, ಈ ವರ್ಷ 708 ರನ್ ಗಳಿಸಿದ್ದಾರೆ. ಕ್ರಿಸ್ ಗೇಲ್ 2012ರಲ್ಲಿ 733, 2013ರಲ್ಲಿ 708 ರನ್ ಕಲೆಹಾಕಿದ್ದರು.
ಈ ಐಪಿಎಲ್‌ನಲ್ಲಿ ಕೊಹ್ಲಿ 37 ಸಿಕ್ಸರ್!
ವಿರಾಟ್ ಕೊಹ್ಲಿ ಈ ಐಪಿಎಲ್‌ನಲ್ಲಿ ಒಟ್ಟು 37 ಸಿಕ್ಸರ್ ಸಿಡಿಸಿದ್ದು, ಅತಿಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಒಟ್ಟು 455 ಎಸೆತಗಳಲ್ಲಿ 37 ಸಿಕ್ಸರ್ ಚಚ್ಚಿದ್ದಾರೆ. ಹೈದರಾಬಾದ್‌ನ ಅಭಿಷೇಕ್ ಶರ್ಮಾ 41 ಸಿಕ್ಸರ್ ಬಾರಿಸಿದ್ದಾರೆ. ನಿಕೋಲಸ್ ಪೂರನ್ ಕೇವಲ 280 ಎಸೆತಗಳಲ್ಲಿ 36 ಸಿಕ್ಸರ್ ಬಾರಿಸಿ 3ನೇ ಸ್ಥಾನದಲ್ಲಿದ್ದಾರೆ.