ಸಾರಾಂಶ
ನವದೆಹಲಿ: ಮುಂಬರುವ ಬಹುನಿರೀಕ್ಷಿತ ಟಿ20 ವಿಶ್ವಕಪ್‌ಗೆ ಭಾರತ ತಾರಾ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡದಿರಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿವೆ.ಕೊಹ್ಲಿ ಟಿ20ಯಲ್ಲಿ ಉತ್ತಮ ಸ್ಟ್ರೈಕ್‌ರೇಟ್ ಹೊಂದಿಲ್ಲ. ಅಲ್ಲದೆ ವಿಶ್ವಕಪ್‌ಗೆ ಆತಿಥ್ಯ ವಹಿಸಲಿರುವ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಿಧಾನಗತಿ ಪಿಚ್‌ಗಳಿರುವ ಹಿನ್ನೆಲೆಯಲ್ಲಿ ಕೊಹ್ಲಿಯನ್ನು ಆಯ್ಕೆ ಮಾಡದೆ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ರಾಷ್ಟ್ರೀಯ ತಂಡದ ಆಯ್ಕೆಗಾರರು, ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಆಸಕ್ತಿ ಹೊಂದಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಯುವ ಆಟಗಾರರ ಕಡೆಗೆ ಮಣೆ ಹಾಕಲು ಆಯ್ಕೆಗಾರರು ಎದುರು ನೋಡುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಭಾರತ ಟಿ20 ತಂಡಕ್ಕೆ ಆಯ್ಕೆಯಾಗದೇ ಇದ್ದರೂ ಅಚ್ಚರಿಯೇನಿಲ್ಲ ಎಂದು ತಿಳಿದುಬಂದಿದೆ.ಕೊಹ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಈಗಲೂ ಸರ್ವಶ್ರೇಷ್ಠ ಬ್ಯಾಟರ್. ಆದರೆ ಟಿ20 ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಆಟವಾಡಲು ವಿಫಲರಾಗಿದ್ದಾರೆ ಎಂಬುದು ಆಯ್ಕೆ ಸಮಿತಿ ಅಭಿಪ್ರಾಯ ಎಂದು ವರದಿಗಳು ತಿಳಿಸಿವೆ. ಆದರೆ ಮಾ.22ರಿಂದ ಆರಂಭಗೊಳ್ಳಲಿರುವ ಐಪಿಎಲ್‌ನಲ್ಲಿ ಅವರು ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದರ ಮೇಲೆ ಟಿ20 ವಿಶ್ವಕಪ್ ತಂಡದಲ್ಲಿನ ಸ್ಥಾನದ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ.ಭಾರತ 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಯಾವುದೇ ಐಸಿಸಿ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ಈ ಬಾರಿಯಾದರೂ ಪ್ರಶಸ್ತಿ ಬರ ನೀಗಿಸಬೇಕೆಂಬುದು ಬಿಸಿಸಿಐ ಆಶಯ. ಇದೇ ಕಾರಣಕ್ಕೆ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಮಂಡಳಿ ಮುಂದಾಗಿದೆ ಎನ್ನಲಾಗುತ್ತಿದೆ.