ಸಾರಾಂಶ
ನವದೆಹಲಿ: ಟಿ20 ವಿಶ್ವಕಪ್ ಗೆದ್ದ ಬಳಿಕ ತಮಗೆ ಅಭಿನಂದನೆ ಸಲ್ಲಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಒಳ್ಳೆಯ ಮಾತುಗಳಿಗೆ ಧನ್ಯವಾದಗಳು ಎಂದಿದ್ದಾರೆ.
ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ ಅವರು ಮಾಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ‘ಪ್ರೀತಿಯ ನರೇಂದ್ರ ಮೋದಿ ಸರ್, ನಿಮ್ಮ ಒಳ್ಳೆಯ, ಬೆಂಬಲದ ಹಾಗೂ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು. ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿರುವುದು ಗೌರವ. ವಿಶ್ವಕಪ್ ಭಾರತೀಯರಲ್ಲಿ ಸಂಭ್ರಮಕ್ಕೆ ಕಾರಣವಾಗಿದ್ದಕ್ಕೆ ಹೆಮ್ಮೆಯಾಗುತ್ತಿದೆ’ ಎಂದಿದ್ದಾರೆ. ವಿಶ್ವಕಪ್ ಗೆದ್ದ ಬಳಿಕ ಮೋದಿ ಅವರು ಕೊಹ್ಲಿಗೆ ಕರೆ ಮಾಡಿ ಮಾತನಾಡಿದ್ದರು.
ಟೆಸ್ಟ್ ಚಾಂಪಿಯನ್‌ಶಿಪ್ ಕೂಡಾ ಗೆಲ್ಲಿ: ಕೊಹ್ಲಿಗೆ ಹೇಳಿದ ದ್ರಾವಿಡ್
ಬ್ರಿಡ್ಜ್‌ಟೌನ್: ಎಲ್ಲಾ ಮೂರು ಮಾದರಿಯ ಐಸಿಸಿ ಟ್ರೋಫಿ ಗೆದ್ದಿದ್ದೀರಿ. ಇನ್ನು ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಮಾತ್ರ ಬಾಕಿಯಿದೆ. ಅದನ್ನು ಕೂಡಾ ಗೆಲ್ಲಿ ಎಂದು ಭಾರತ ತಂಡದ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್ ಅವರು ವಿರಾಟ್ ಕೊಹ್ಲಿಗೆ ಹೇಳಿದ್ದಾರೆ.
ಫೈನಲ್ ಬಳಿಕ ಡ್ರೆಸ್ಸಿಂಗ್ ಕೋಣೆಯಲ್ಲಿ ಮಾತನಾಡುತ್ತಿದ್ದಾಗ ಕೊಹ್ಲಿಗೆ ದ್ರಾವಿಡ್ ಅವರು. ‘ಎಲ್ಲಾ ಮೂರು ಬಿಳಿ ಟಿಕ್ ಮಾಡಿಯಾಗಿದೆ. ಇನ್ನು ಒಂದು ಕೆಂಪು ಟಿಕ್ ಬಾಕಿಯಿದೆ. ಅದನ್ನೂ ಮಾಡಿ ಬಿಡಿ’ ಎಂದಿದ್ದಾರೆ. ಕೊಹ್ಲಿ 2024ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದಲ್ಲಿದ್ದರು. ಆದರೆ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಬಾರಿ(2021, 2023) ಫೈನಲ್ ಪ್ರವೇಶಿಸಿದರೂ ಭಾರತ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.