ಯಶಸ್ಸು ಸಾಧಿಸಬೇಕೆಂಬ ಹಸಿವು ಇದ್ದವರಿಗೆ ಮಾತ್ರ ಆಡಲು ಅವಕಾಶ: ರೋಹಿತ್‌ ಶರ್ಮಾ

| Published : Feb 28 2024, 02:35 AM IST

ಸಾರಾಂಶ

ಆಟಗಾರರಿಗೆ ಬಿಸಿಸಿಐ ಸೂಕ್ತ ಕ್ರಮದ ಎಚ್ಚರಿಗೆ ನೀಡಿದ ಹೊರತಾಗಿಯೂ ಕೆಲವರು ಅದನ್ನು ಕಡೆಗಣಿಸಿದ್ದಾರೆ. ಇದರ ನಡುವೆಯೇ ರೋಹಿತ್‌ ಹೇಳಿಕೆ ಬಂದಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ನವದೆಹಲಿ: ಏಕದಿನ, ಟಿ20 ಆಡಿದರೂ ಟೆಸ್ಟ್‌ ಕ್ರಿಕೆಟ್‌ ಕಡೆಗಣಿಸುತ್ತಿರುವ ಕೆಲ ಆಟಗಾರರ ಬಗ್ಗೆ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಮವಾರ ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ನ ಬಳಿಕ ಮಾತನಾಡಿರುವ ಅವರು, ‘ಟೆಸ್ಟ್‌ ಕ್ರಿಕೆಟ್‌ ಅತ್ಯಂತ ಕಠಿಣ ಮಾದರಿ. ಸವಾಲುಗಳನ್ನು ಸ್ವೀಕರಿಸಿ ಯಶಸ್ಸು ಸಾಧಿಸಬೇಕು ಎನ್ನುವ ‘ಹಸಿವು’ ಇರುವ ಆಟಗಾರರಿಗೆ ಮಾತ್ರ ಅವಕಾಶ ನೀಡುತ್ತೇವೆ. ‘ಹಸಿವು’ ಇಲ್ಲದವರನ್ನು ಆಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದಿದ್ದಾರೆ.

ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌ ಸೇರಿದಂತೆ ಹಲವರು ಭಾರತ ತಂಡದಿಂದ ಹೊರಗುಳಿದಿದ್ದರೂ ದೇಸಿ ಕ್ರಿಕೆಟ್‌ನಲ್ಲಿ ಆಡದೆ ಐಪಿಎಲ್‌ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐ ಸೂಕ್ತ ಕ್ರಮದ ಎಚ್ಚರಿಗೆ ನೀಡಿದ ಹೊರತಾಗಿಯೂ ಕೆಲ ಆಟಗಾರರು ಅದನ್ನು ಕಡೆಗಣಿಸಿದ್ದಾರೆ. ಇದರ ನಡುವೆಯೇ ರೋಹಿತ್‌ ಹೇಳಿಕೆ ಬಂದಿದ್ದು, ಕುತೂಹಲಕ್ಕೆ ಕಾರಣವಾಗಿದೆ.ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯ ಆಡಿದ್ದ ಶ್ರೇಯಸ್‌ ಗಾಯದ ಕಾರಣದಿಂದಾಗಿ 3 ಮತ್ತು 4ನೇ ಟೆಸ್ಟ್‌ಗಳಿಗೆ ತಂಡದಿಂದ ಹೊರಗುಳಿದಿದ್ದರು. ಅವರು ಬೆನ್ನು ನೋವಿನ ಸಮಸ್ಯೆಯನ್ನು ಉಲ್ಲೇಖಿಸಿ ಬರೋಡಾ ವಿರುದ್ಧ ಮುಂಬೈನ ರಣಜಿ ಕ್ವಾರ್ಟರ್‌ ಫೈನಲ್‌ನಿಂದ ಹೊರಗುಳಿದಿದ್ದರು. ಆದರೆ ಎನ್‌ಸಿಎ ಶ್ರೇಯಸ್‌ ಅಯ್ಯರ್‌ ಆಡಲು ಫಿಟ್‌ ಇದ್ದಾರೆ ಎಂದು ವರದಿ ನೀಡಿತ್ತು.