ಸಾರಾಂಶ
ಬೆಂಗಳೂರು: ಐಪಿಎಲ್ ಪ್ಲೇ-ಆಫ್ ಸನಿಹದಲ್ಲೇ ಆರ್‌ಸಿಬಿಯ ತಾರಾ ಆಲ್ರೌಂಡರ್ ವಿಲ್ ಜ್ಯಾಕ್ಸ್, ವೇಗಿ ರೀಸ್ ಟಾಪ್ಲಿ ಹಾಗೂ ರಾಜಸ್ಥಾನ ರಾಯಲ್ಸ್‌ನ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ತಮ್ಮ ತವರು ದೇಶ ಇಂಗ್ಲೆಂಡ್‌ಗೆ ಹಿಂದಿರುಗಿದ್ದಾರೆ.
ಟಿ20 ವಿಶ್ವಕಪ್ ಸಿದ್ಧತೆಗಾಗಿ ಅವರು ಶೀಘ್ರದಲ್ಲೇ ರಾಷ್ಟ್ರೀಯ ತಂಡಗಳನ್ನು ಕೂಡಿಕೊಳ್ಳಲಿದ್ದಾರೆ. ಇಂಗ್ಲೆಂಡ್ ತಂಡ ಮೇ 22ರಿಂದ ಪಾಕಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಹೀಗಾಗಿ ಐಪಿಎಲ್‌ನ ಲೀಗ್ ಹಂತ ಹಾಗೂ ನಾಕೌಟ್ ಪಂದ್ಯಗಳಿಗೆ ಗೈರಾಗಲಿದ್ದಾರೆ.
ಸೋಮವಾರ ವಿಲ್ ಜ್ಯಾಕ್ಸ್, ರೀಸ್ ಟಾಪ್ಲಿ ಹಾಗೂ ಜೋಸ್ ಬಟ್ಲರ್ ತವರಿಗೆ ಹಿಂದಿರುಗುತ್ತಿರುವ ವಿಡಿಯೋಗಳನ್ನು ಫ್ರಾಂಚೈಸಿಗಳು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿವೆ.
ನಿರ್ಣಾಯಕ ಪಂದ್ಯಗಳಲ್ಲಿ ತಾರಾ ಆಟಗಾರರು ಗೈರು ತಂಡಗಳಿಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆಯಿದೆ. ಆರ್‌ಸಿಬಿ ಮೇ 18ಕ್ಕೆ ಚೆನ್ನೈ ವಿರುದ್ಧ, ರಾಜಸ್ಥಾನ ತಂಡ ಮೇ 15ಕ್ಕೆ ಪಂಜಾಬ್, ಮೇ 19ಕ್ಕೆ ಕೋಲ್ಕತಾ ವಿರುದ್ಧ ಸೆಣಸಾಡಬೇಕಿದೆ.ಇನ್ನು, ಪಂಜಾಬ್ ಕಿಂಗ್ಸ್‌ನ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡಾ ತವರಿಗೆ ಹಿಂದಿರುಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನ ಮೊಯೀನ್ ಅಲಿ, ಕೋಲ್ಕತಾ ನೈಟ್ ರೈಡರ್ಸ್‌ನ ಫಿಲ್ ಸಾಲ್ಟ್, ಪಂಜಾಬ್ ಕಿಂಗ್ಸ್‌ನ ಜಾನಿ ಬೇರ್‌ಸ್ಟೋವ್ ಕೂಡಾ ಕೆಲ ದಿನಗಳಲ್ಲೇ ಇಂಗ್ಲೆಂಡ್ ಮರಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಜೂ.1ಕ್ಕೆ ವಿಶ್ವಕಪ್ ಆರಂಭಗೊಳ್ಳಲಿದೆ.