49ನೇ ಬಾರಿ ಗ್ರ್ಯಾನ್‌ಸ್ಲಾಂ ಸೆಮೀಸ್‌ಗೆ ಜೋಕೋವಿಚ್‌!

| Published : Jul 11 2024, 01:39 AM IST / Updated: Jul 11 2024, 04:09 AM IST

ಸಾರಾಂಶ

ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ತಮ್ಮ ಕ್ವಾರ್ಟರ್‌ ಫೈನಲ್‌ ಎದುರಾಳಿ ಅಲೆಕ್ಸ್‌ಗೆ ಗಾಯ. ಹೀಗಾಗಿ ಜೋಕೋ ಸೆಮೀಸ್‌ಗೆ ವಾಕ್‌ಓವರ್‌. 8ನೇ ವಿಂಬಲ್ಡನ್‌ ಗೆಲುವಿಗೆ ಮತ್ತಷ್ಟು ಹತ್ತಿರ.

ಲಂಡನ್‌: ಸಾರ್ವಕಾಲಿಕ ಶ್ರೇಷ್ಠ ಟೆನಿಸಿಗರಲ್ಲಿ ಓರ್ವರಾಗಿರುವ ಸರ್ಬಿಯಾದ ನೋವಾಕ್‌ ಜೋಕೋವಿಚ್‌ 49ನೇ ಬಾರಿ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ದಾಖಲೆಯ 25ನೇ ಗ್ರ್ಯಾನ್‌ಸ್ಲಾಂ ಟ್ರೋಫಿ ಗೆಲ್ಲುವ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

ವಿಂಬಲ್ಡನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.2 ಜೋಕೋವಿಚ್‌ ಬುಧವಾರ ಆಸ್ಟ್ರೇಲಿಯಾದ ಅಗ್ರ ಟೆನಿಸಿಗ ಅಲೆಕ್ಸ್‌ ಡೆ ಮಿನಾರ್‌ ವಿರುದ್ಧ ಸೆಣಸಬೇಕಿತ್ತು. ಆದರೆ ಪ್ರಿ ಕ್ವಾರ್ಟರ್‌ ಫೈನಲ್‌ ವೇಳೆ ಕಾಣಿಸಿಕೊಂಡಿದ್ದ ಗಾಯದ ಕಾರಣದಿಂದಾಗಿ ಮಿನಾರ್‌, ಜೋಕೋ ವಿರುದ್ಧ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೂ ಮುನ್ನವೇ ಟೂರ್ನಿಯಿಂದ ನಿರ್ಗಮಿಸಿದರು.

 ಇದರೊಂದಿಗೆ ಗ್ರ್ಯಾನ್‌ಸ್ಲಾಂನಲ್ಲಿ ಮೊದಲ ಬಾರಿ ಸೆಮಿಫೈನಲ್‌ ಪ್ರವೇಶಿಸುವ ವಿಶ್ವ ನಂ.9 ಆಟಗಾರನ ಕನಸು ಭಗ್ನಗೊಂಡಿತು. ವಿಂಬಲ್ಡನ್‌ನ 7 ಬಾರಿ ಚಾಂಪಿಯನ್‌ ಜೋಕೋ, ಟೂರ್ನಿಯಲ್ಲಿ 13ನೇ ಬಾರಿ ಸೆಮೀಸ್‌ಗೇರಿದ್ದು, ಶುಕ್ರವಾರ ಅಂತಿಮ 4ರ ಸುತ್ತಿನ ಪಂದ್ಯದಲ್ಲಿ 25ನೇ ಶ್ರೇಯಾಂಕಿತ, ಇಟಲಿಯ ಲೊರೆಂಜೊ ಮುಸೆಟ್ಟಿ/13ನೇ ಶ್ರೇಯಾಂಕಿತ ಅಮೆರಿಕದ ಟೇಲರ್ ಫ್ರಿಟ್ಜ್‌ ವಿರುದ್ಧ ಸೆಣಸಾಡಲಿದ್ದಾರೆ. 

ಸೆಮೀಸ್‌ಗೆ ರಬೈಕೆನಾ, ಕ್ರೇಜಿಕೋವಾ ಪ್ರವೇಶ

ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ಚಾಂಪಿಯನ್‌ ಎಲೆನಾ ರಬೈಕೆನಾ, 2021ರ ಫ್ರೆಂಚ್‌ ಓಪನ್‌ ಚಾಂಪಿಯನ್‌ ಬಾರ್ಬೋರಾ ಕ್ರೇಜಿಕೋವಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

 ಕಜಕಸ್ತಾನದ ರಬೈಕೆನಾ ಕ್ವಾರ್ಟರ್‌ನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ 6-3, 6-2 ಸೆಟ್‌ಗಳಲ್ಲಿ ಗೆದ್ದರೆ, ಚೆಕ್‌ ಗಣರಾಜ್ಯದ ಕ್ರೇಜಿಕೋವಾ ಅವರು 13ನೇ ಶ್ರೇಯಾಂಕಿತೆ, ಲಾಟ್ವಿಯಾ ದೇಶದ ಎಲೆನಾ ಓಸ್ಟಪೆನ್ಕೋ ವಿರುದ್ಧ 6-4, 7-6(7/4) ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 

ಗುರುವಾರ ಸೆಮಿಫೈನಲ್‌ನಲ್ಲಿ ರಬೈಕೆನಾ-ಕ್ರೇಜಿಕೋವಾ ಮುಖಾಮುಖಿಯಾಗಲಿದ್ದಾರೆ. ಮತ್ತೊಂದು ಸೆಮೀಸ್‌ನಲ್ಲಿ ಸರ್ಬಿಯಾದ ಡೊನಾ ವೆಕಿಚ್‌-2024ರ ಫ್ರೆಂಚ್‌ ಓಪನ್‌ ರನ್ನರ್‌ ಅಪ್‌, ಇಟಲಿಯ ಜಾಸ್ಮೀನ್‌ ಪೌಲಿನಿ ಪರಸ್ಪರ ಸೆಣಸಲಿದ್ದಾರೆ.