ಸಾರಾಂಶ
25ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲಬೇಕು ಎನ್ನುವ ನೋವಾಕ್ ಜೋಕೋವಿಚ್‌ರ ಕನಸು ಮತ್ತೆ ಭಗ್ನಗೊಂಡಿದೆ.
ಲಂಡನ್: 25ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲಬೇಕು ಎನ್ನುವ ನೋವಾಕ್ ಜೋಕೋವಿಚ್‌ರ ಕನಸು ಮತ್ತೆ ಭಗ್ನಗೊಂಡಿದೆ. ವಿಂಬಲ್ಡನ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸರ್ಬಿಯಾದ ಟೆನಿಸ್ ದೊರೆ ಜೋಕೋವಿಚ್‌ಗೆ ವಿಶ್ವ ನಂ.1, ಇಟಲಿಯ ಯಾನ್ನಿಕ್ ಸಿನ್ನರ್ ವಿರುದ್ಧ 3-6, 3-6, 4-6 ನೇರ ಸೆಟ್‌ಗಳಲ್ಲಿ ಸೋಲು ಎದುರಾಯಿತು.
ಶುಕ್ರವಾರ ನಡೆದ ಪಂದ್ಯ ಸಂಪೂರ್ಣವಾಗಿ ಏಕಪಕ್ಷೀಯವಾಗಿ ಸಾಗಿತು. ಜೋಕೋವಿಚ್ ವಿರುದ್ಧ ಸತತ 5ನೇ ಗೆಲುವು ಸಾಧಿಸಿದ ಸಿನ್ನರ್, ಮೊದಲ ಬಾರಿಗೆ ವಿಂಬಲ್ಡನ್ ಫೈನಲ್ ಪ್ರವೇಶಿಸಿದರು.
2023ರ ಯುಎಸ್ ಓಪನ್ ಗೆಲ್ಲುವ ಮೂಲಕ 24 ಗ್ರ್ಯಾನ್ ಸ್ಲಾಂ ಪ್ರಶಸ್ತಿ ಪೂರೈಸಿದ್ದ ಜೋಕೋವಿಚ್‌ಗೆ ಆ ಬಳಿಕ ಮತ್ತೊಂದು ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ. 2024ರ ವಿಂಬಲ್ಡನ್ ಫೈನಲ್‌ನಲ್ಲಿ ಎಡವಿದ್ದ ಜೋಕೋ, ಈ ಬಾರಿ ಸೆಮೀಸ್‌ನಲ್ಲೇ ಮುಗ್ಗರಿಸಿದ್ದಾರೆ. ಇನ್ನು, ಜೋಕೋವಿಚ್ ಈ ವರ್ಷ ಆಡಿರುವ ಮೂರೂ ಗ್ರ್ಯಾನ್ ಸ್ಲಾಂಗಳಲ್ಲಿ ಸೆಮೀಸ್‌ನಲ್ಲೇ ಸೋತಿದ್ದಾರೆ. ಇದೇ ವೇಳೆ, ಮೊದಲ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಸ್ಪೇನ್‌ನ ಕಾರ್ಲೋಸ್ ಆಲ್ಕರಜ್ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ 6-4, 5-7, 6-3, 7-6 (8/6) ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಸತತ 3ನೇ ಬಾರಿಗೆ ಫೈನಲ್‌ಗೇರಿದರು. ಆಲ್ಕರಜ್ ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.