ಸಾರಾಂಶ
ಲಂಡನ್: 147 ವರ್ಷಗಳ ಇತಿಹಾಸವಿರುವ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಇನ್ಮುಂದೆ ಲೈನ್ ಜಡ್ಜ್‌ಗಳು ಇರುವುದಿಲ್ಲ. ವಿಂಬಲ್ಡನ್ ಆಯೋಜಕರಾದ ಆಲ್ ಇಂಗ್ಲೆಂಡ್ ಕ್ಲಬ್, ಟೂರ್ನಿಯಲ್ಲಿ ಸರ್ವಿಸ್ ಫಾಲ್ಟ್, ಔಟ್ ತೀರ್ಪುಗಳನ್ನು ನೀಡಲು 2025ರಿಂದ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಕೆ ಮಾಡಲು ನಿರ್ಧರಿಸಿದೆ.
ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಆಲ್ ಇಂಗ್ಲೆಂಡ್ ಕ್ಲಬ್‌ನ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಲಿ ಬೋಲ್ಟನ್, ‘ಟೂರ್ನಿ ಇಷ್ಟು ವರ್ಷ ಯಶಸ್ವಿಯಾಗಿ ನಡೆಯಲು ಲೈನ್ ಜಡ್ಜ್‌ಗಳ ಕೊಡುಗೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಆದರೆ ಕಾಲ ಬದಲಾದಂತೆ ತಂತ್ರಜ್ಞಾನದ ಬಳಕೆಯೂ ಮುಖ್ಯವಾಗಲಿದೆ. ಮತ್ತಷ್ಟು ಪಾರದರ್ಶಕ ಆಟಕ್ಕೆ ಎಐನಿಂದ ಅನುಕೂಲವಾಗಲಿದೆ.
ಹಲವು ವರ್ಷಗಳಿಂದ ಇರುವ ಬಾಲ್ ಟ್ರ್ಯಾಕಿಂಗ್ ವ್ಯವಸ್ಥೆಯೂ ಮುಂದುವರಿಯಲಿದೆ, ಕಳೆದ ವರ್ಷ ಟೂರ್ನಿಯಲ್ಲಿ ಎಐ ಅನ್ನು ಪ್ರಾಯೋಗಿಕವಾಗಿ ಬಳಕೆ ಮಾಡಿದ್ದೆವು. ಅದರಿಂದ ಸಿಕ್ಕ ಫಲಿತಾಂಶವನ್ನು ಪರಿಗಣಿಸಿ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.