ಇಂದು ಆಸ್ಟ್ರೇಲಿಯಾ-ಅಫ್ಘಾನಿಸ್ತಾನ ಪಂದ್ಯ. ಸೆಮಿಫೈನಲ್‌ ಸ್ಥಾನದ ಮೇಲೆ ಉಭಯ ತಂಡಗಳ ಕಣ್ಣು

| N/A | Published : Feb 28 2025, 12:50 AM IST / Updated: Feb 28 2025, 03:55 AM IST

ಸಾರಾಂಶ

ಇಂದು ಆಸ್ಟ್ರೇಲಿಯಾ-ಅಫ್ಘಾನಿಸ್ತಾನ ಪಂದ್ಯ. ಸೆಮಿಫೈನಲ್‌ ಸ್ಥಾನದ ಮೇಲೆ ಉಭಯ ತಂಡಗಳ ಕಣ್ಣು. ಗೆಲ್ಲುವ ತಂಡ ಸೆಮೀಸ್‌ಗೆ ಪ್ರವೇಶ. ಸೋಲುವ ತಂಡ ಟೂರ್ನಿಯಿಂದ ಬಹುತೇಕ ಔಟ್‌.

ಲಾಹೋರ್‌: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳು ಶುಕ್ರವಾರ ಮಹತ್ವದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಈ ಪಂದ್ಯವೂ ‘ಬಿ’ ಗುಂಪಿನಿಂದ ಸೆಮಿಫೈನಲ್‌ಗೇರುವ ತಂಡವನ್ನು ನಿರ್ಧರಿಸಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ದೊಡ್ಡ ಮೊತ್ತ ಚೇಸ್‌ ಮಾಡಿ ಗೆದ್ದಿದ್ದ ಆಸ್ಟ್ರೇಲಿಯಾ, ದ.ಆಫ್ರಿಕಾ ವಿರುದ್ಧದ ಪಂದ್ಯ ಮಳೆಗೆ ಬಲಿಯಾದ ಕಾರಣ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. ಆಸೀಸ್‌ ಬಳಿ 3 ಅಂಕಗಳಿದ್ದು ಈ ಪಂದ್ಯದಲ್ಲಿ ಗೆದ್ದರೆ ಸೆಮೀಸ್‌ನಲ್ಲಿ ಸ್ಥಾನ ಪಡೆಯಲಿದೆ.

ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಸೋಲುಂಡರೂ, 2ನೇ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸೋಲುಣಿಸಿದ ಆಫ್ಘನ್‌ ತನ್ನ ಸೆಮೀಸ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಆಸೀಸ್‌ ವಿರುದ್ಧ ಗೆದ್ದಿದ್ದ ಅಫ್ಘಾನಿಸ್ತಾನ ಮತ್ತೊಮ್ಮೆ ಅಚ್ಚರಿಯ ಫಲಿತಾಂಶ ದಾಖಲಿಸಲು ಎದುರು ನೋಡುತ್ತಿದೆ.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತರೆ, ಆಗ ದ.ಆಫ್ರಿಕಾ ಹಾಗೂ ಇಂಗ್ಲೆಂಡ್‌ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ. ಪಂದ್ಯಕ್ಕೆ ಮಳೆ ಕಾಟ?

ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ 2 ಪಂದ್ಯಗಳು ಮಳೆಗೆ ಬಲಿಯಾದ ಬಳಿಕ ಇದೀಗ ಲಾಹೋರ್‌ನಲ್ಲಿ ನಡೆಯಬೇಕಿರುವ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ಮಳೆಗೆ ಆಹುತಿಯಾದರೆ, ಆಸ್ಟ್ರೇಲಿಯಾ ಸೆಮೀಸ್‌ಗೇರಲಿದೆ. ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌