ಸಾರಾಂಶ
ಭಾರತದ ಈ ಗೆಲುವಿನೊಂದಿಗೆ ‘ಬಿ’ ಗುಂಪಿನಲ್ಲಿ 3 ಪಂದ್ಯಗಳಲ್ಲಿ 2 ಜಯದೊಂದಿಗೆ 6 ಅಂಕಗಳಿಸಿ 2ನೇ ಸ್ಥಾನಿಯಾಯಿತು. ಅಮೆರಿಕ(09 ಅಂಕ) ಅಗ್ರಸ್ಥಾನಿಯಾಗಿಯೇ ಸೆಮೀಸ್‌ಗೇರಿತು. ಸೆಮಿಫೈನಲ್‌ನಲ್ಲಿ ಭಾರತ ಜ.18ರಂದು ಜರ್ಮನಿ ವಿರುದ್ಧ ಆಡಬೇಕಿದೆ.
ರಾಂಚಿ: ಒಲಿಂಪಿಕ್ಸ್ ಅರ್ಹತಾ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಮಂಗಳವಾರ ನಿರ್ಣಾಯಕ ಪಂದ್ಯದಲ್ಲಿ ಭಾರತ, ಇಟಲಿ ವಿರುದ್ಧ 5-1 ಗೋಲುಗಳಿಂದ ಜಯಭೇರಿ ಬಾರಿಸಿತು. ಇದರೊಂದಿಗೆ ‘ಬಿ’ ಗುಂಪಿನಲ್ಲಿ ಭಾರತ 3 ಪಂದ್ಯಗಳಲ್ಲಿ 2 ಜಯದೊಂದಿಗೆ 6 ಅಂಕಗಳಿಸಿ 2ನೇ ಸ್ಥಾನಿಯಾಯಿತು. ಅಮೆರಿಕ(09 ಅಂಕ) ಅಗ್ರಸ್ಥಾನಿಯಾಗಿಯೇ ಸೆಮೀಸ್‌ಗೇರಿತು. ಪಂದ್ಯದಲ್ಲಿ ಭಾರತದ ಪರ ಉದಿತಾ(1 ಮತ್ತು 55ನೇ ನಿಮಿಷ), ದೀಪಿಕಾ(41ನೇ ನಿ.), ಸಲೀಮಾ ಟೆಟೆ(45ನೇ ನಿ.), ಹಾಗೂ ನವ್‌ನೀತ್ ಕೌರ್(53ನೇ ನಿ.)ಗೋಲು ಬಾರಿಸಿದರು.ಆರಂಭಿಕ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತು, 2ನೇ ಪಂದ್ಯದಲ್ಲಿ ನ್ಯೂಜಿಲೆಂಡನ್ನು ಮಣಿಸಿದ್ದ ಭಾರತ, ಜ.18ಕ್ಕೆ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ ಸೆಣಸಾಡಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಅಮೆರಿಕ-ಜಪಾನ್ ಮುಖಾಮುಖಿಯಾಗಲಿವೆ.ಇಂಡಿಯಾ ಓಪನ್: ಗೆದ್ದ ಪ್ರಣಯ್, ಸೋತ ಸೇನ್
ನವದೆಹಲಿ: ಮಂಗಳವಾರ ಆರಂಭಗೊಂಡ ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಆಟಗಾರ ಎಚ್.ಎಸ್.ಪ್ರಣಯ್ ಶುಭಾರಂಭ ಮಾಡಿದ್ದಾರೆ. ಆದರೆ ಯುವ ತಾರೆ ಲಕ್ಷ್ಯ ಸೇನ್ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ. ವಿಶ್ವ ನಂ.9 ಪ್ರಣಯ್, ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ವಿಶ್ವ ನಂ.13, ಚೈನೀಸ್ ತೈಪೆಯ ಚೊಯು ಟೀನ್ ಚೆನ್ ವಿರುದ್ಧ 21-6, 21-19ರಲ್ಲಿ ಗೆಲುವು ಸಾಧಿಸಿದರು. ಆದರೆ ಸೇನ್, ಭಾರತದವರೇ ಆದ 21ರ ಪ್ರಿಯಾನ್ಶು ರಾಜಾವತ್ ವಿರುದ್ಧ 21-16, 16-21, 13-21ರಲ್ಲಿ ಪರಾಭವಗೊಂಡರು. ಕಿರಣ್ ಜಾರ್ಜ್ ಕೂಡಾ ಮೊದಲ ಸುತ್ತಲ್ಲೇ ಅಭಿಯಾನ ಕೊನೆಗೊಳಿಸಿದರು. ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ, ಪುರುಷರ ಡಬಲ್ಸ್‌ನಲ್ಲಿ ಅರ್ಜುನ್-ಧ್ರುವ್ ಕಪಿಲಾ ಜೋಡಿ ಸೋತು ಹೊರಬಿದ್ದವು.