ಇಂದಿನಿಂದ ಬೆಂಗಳೂರಲ್ಲಿ ಮಹಿಳಾ ಐಪಿಎಲ್‌

| Published : Feb 23 2024, 01:47 AM IST / Updated: Feb 23 2024, 08:48 AM IST

ಸಾರಾಂಶ

ಬಹುನಿರೀಕ್ಷಿತ 2ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ಗೆ ಶುಕ್ರವಾರ ಚಾಲನೆ ಸಿಗಲಿದ್ದು, ಇನ್ನು 11 ದಿನಗಳ ಕಾಲ ಬೆಂಗಳೂರಿನಲ್ಲಿ ‘ಮಹಿಳಾ ಐಪಿಎಲ್‌’ ರಂಗೇರಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಹುನಿರೀಕ್ಷಿತ 2ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ಗೆ ಶುಕ್ರವಾರ ಚಾಲನೆ ಸಿಗಲಿದ್ದು, ಇನ್ನು 11 ದಿನಗಳ ಕಾಲ ಬೆಂಗಳೂರಿನಲ್ಲಿ ‘ಮಹಿಳಾ ಐಪಿಎಲ್‌’ ರಂಗೇರಲಿದೆ.

ಕಳೆದ ಬಾರಿ ಮುಂಬೈನಲ್ಲೇ ಎಲ್ಲಾ ಪಂದ್ಯ ನಡೆಸಲಾಗಿದ್ದು, ಈ ಬಾರಿ ಟೂರ್ನಿಯನ್ನು 2 ನಗರಗಳಲ್ಲಿ ಆಯೋಜಿಸಲಾಗುತ್ತಿದೆ. ಬೆಂಗಳೂರಿನಲ್ಲಿ 11 ಪಂದ್ಯಗಳು ನಡೆಯಲಿದ್ದು, ಫೈನಲ್‌ ಸೇರಿ ಇನ್ನುಳಿದ 11 ಪಂದ್ಯಗಳಿಗೆ ನವದೆಹಲಿ ಆತಿಥ್ಯ ವಹಿಸಲಿದೆ.

ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೇರಿದಂತೆ 5 ತಂಡಗಳು ಪಾಲ್ಗೊಳ್ಳಲಿವೆ. ಕಳೆದ ಬಾರಿ ಫೈನಲ್‌ಗೇರಿದ್ದ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಟೂರ್ನಿ ಮಾದರಿ: ಟೂರ್ನಿ ಡಬಲ್‌ ರೌಂಡ್ ರಾಬಿನ್‌ ಮಾದರಿಯಲ್ಲಿ ನಡೆಯಲಿದ್ದು, ಲೀಗ್‌ ಹಂತದಲ್ಲಿ ಪ್ರತಿ ತಂಡಗಳು 2 ಬಾರಿ ಪರಸ್ಪರ ಮುಖಾಮುಖಿಯಾಗಲಿವೆ. 

ಲೀಗ್‌ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್‌ಗೇರಲಿದ್ದು, 2 ಮತ್ತು 3ನೇ ಸ್ಥಾನಿಯಾದ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಗೆದ್ದ ತಂಡ ಪ್ರಶಸ್ತಿ ಸುತ್ತಿಗೇರಲಿದೆ.

ಉದ್ಘಾಟನಾ ಸಮಾರಂಭಕ್ಕೆಶಾರುಖ್, ಟೈಗರ್‌ ಶ್ರಾಫ್‌!
ಟೂರ್ನಿಯ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನೆರವೇರಲಿದೆ. ಸಂಜೆ 6.30ಕ್ಕೆ ಸಮಾರಂಭ ಆರಂಭಗೊಳ್ಳಲಿದ್ದು, ಬಾಲಿವುಡ್‌ನ ಖ್ಯಾತ ನಟ ಶಾರುಖ್‌ ಖಾನ್‌, ಟೈಗರ್‌ ಶ್ರಾಫ್‌, ಶಾಹೀದ್‌ ಕಪೂರ್‌, ಸಿದ್ಧಾರ್ಥ್‌ ಮಲ್ಹೋತ್ರಾ, ವರುಣ್‌ ಧವನ್‌, ಆರ್ಯನ್‌ ಕಾರ್ತಿಕ್‌ ಸೇರಿದಂತೆ ಕಲಾವಿದರು, ಗಾಯಕರು ಪ್ರದರ್ಶನ ನೀಡಲಿದ್ದಾರೆ.-ಎಲ್ಲಾ ಪಂದ್ಯಗಳು ಸಂಜೆ 7.30ಕ್ಕೆ ಆರಂಭಸ್ಪೋರ್ಟ್ಸ್‌ 18, ಜಿಯೋ ಸಿನಿಮಾದಲ್ಲಿ ನೇರ ಪ್ರಸಾರ