ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಫೈನಲ್‌ಗೆ ಲಗ್ಗೆಯಿಟ್ಟ ನ್ಯೂಜಿಲೆಂಡ್‌ : ಸೆಮಿಫೈನಲ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ರೋಚಕ ಗೆಲುವು

| Published : Oct 19 2024, 01:33 AM IST / Updated: Oct 19 2024, 04:46 AM IST

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಫೈನಲ್‌ಗೆ ಲಗ್ಗೆಯಿಟ್ಟ ನ್ಯೂಜಿಲೆಂಡ್‌ : ಸೆಮಿಫೈನಲ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ರೋಚಕ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ಗೆ ಲಗ್ಗೆಯಿಟ್ಟ ನ್ಯೂಜಿಲೆಂಡ್‌. ಸೆಮಿಫೈನಲ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ರೋಚಕ ಗೆಲುವು. ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ಟ್ರೋಫಿಗಾಗಿ ಸೆಣಸಾಟ.

ಶಾರ್ಜಾ: 14 ವರ್ಷಗಳ ಬಳಿಕ ನ್ಯೂಜಿಲೆಂಡ್‌ ಮಹಿಳಾ ತಂಡ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ ಪ್ರವೇಶಿಸಿದೆ. ಶುಕ್ರವಾರ ಇಲ್ಲಿ ನಡೆದ 2ನೇ ಸೆಮಿಫೈನಲ್‌ ಪಂದ್ಯದಲ್ಲಿ 2016ರ ಚಾಂಪಿಯನ್‌ ವೆಸ್ಟ್‌ಇಂಡೀಸ್‌ ವಿರುದ್ಧ 8 ರನ್‌ಗಳ ರೋಚಕ ಗೆಲುವು ಸಾಧಿಸಿ 3ನೇ ಬಾರಿಗೆ ಫೈನಲ್‌ಗೇರಿತು. ಭಾನುವಾರ (ಅ.20) ನಡೆಯಲಿರುವ ಫೈನಲ್‌ನಲ್ಲಿ ನ್ಯೂಜಿಲೆಂಡ್‌ಗೆ ದಕ್ಷಿಣ ಆಫ್ರಿಕಾ ಎದುರಾಗಲಿದೆ. ಎರಡೂ ತಂಡಗಳು ಚೊಚ್ಚಲ ವಿಶ್ವಕಪ್‌ ಗೆಲ್ಲಲು ಎದುರು ನೋಡುತ್ತಿವೆ.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 20 ಓವರಲ್ಲಿ 9 ವಿಕೆಟ್‌ಗೆ 128 ರನ್‌ ಕಲೆಹಾಕಿತು. ಜಾರ್ಜಿಯಾ ಪ್ಲೈಮರ್‌ 33, ಸೂಜಿ ಬೇಟ್ಸ್‌ 26 ರನ್‌ ಕೊಡುಗೆ ನೀಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 48 ರನ್‌ ಜೊತೆಯಾಟ ಪಡೆದ ಹೊರತಾಗಿಯೂ ಮಧ್ಯಮ, ಕೆಳ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ನ್ಯೂಜಿಲೆಂಡ್‌ ಸಾಧಾರಣ ಮೊತ್ತ ಕಲೆಹಾಕಿತು.

ಸುಲಭ ಗುರಿ ಬೆನ್ನತ್ತಿದ ವೆಸ್ಟ್‌ಇಂಡೀಸ್‌ 11ನೇ ಓವರಲ್ಲಿ ಕೇವಲ 51 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಹಿರಿಯ ಆಟಗಾರ್ತಿ ದಯೇಂದ್ರ ಡಾಟಿನ್‌ ಆಸರೆಯಾದರು. ಅವರ 33 ರನ್‌ ಕೊಡುಗೆ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿತ್ತು. ಆದರೆ, 17ನೇ ಓವರಲ್ಲಿ ಡಾಟಿನ್‌ ಔಟಾಗುತ್ತಿದ್ದಂತೆ ವಿಂಡೀಸ್‌ ಪಡೆಯ ಆತ್ಮವಿಶ್ವಾಸ ಕುಸಿಯಿತು. ಕೊನೆಯ ಓವರಲ್ಲಿ ವಿಂಡೀಸ್‌ಗೆ ಗೆಲ್ಲಲು 15 ರನ್‌ಗಳು ಬೇಕಿದ್ದವು. ಆದರೆ ವಿಂಡೀಸ್‌ 8 ವಿಕೆಟ್‌ಗೆ 120 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸ್ಕೋರ್‌: ನ್ಯೂಜಿಲೆಂಡ್‌ 20 ಓವರಲ್ಲಿ 128/9 (ಪ್ಲೈಮರ್‌ 33, ಬೇಟ್ಸ್‌ 26, ಡಾಟಿನ್‌ 4-22), ವಿಂಡೀಸ್‌ 20 ಓವರಲ್ಲಿ 120/8 (ಡಾಟಿನ್‌ 33, ಕಾರ್ಸನ್‌ 3-29)