ಸಾರಾಂಶ
ಐಸಿಸಿ ಮಹಿಳಾ ಟಿ20 ವಿಶ್ವಕಪ್: ಇಂದು ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಸೆಣಸು. ದಾಖಲೆಯ 8ನೇ ಬಾರಿಗೆ ಫೈನಲ್‌ಗೇರಲು 6 ಬಾರಿಯ ಚಾಂಪಿಯನ್ ಆಸೀಸ್ ತವಕ. 2023ರ ವಿಶ್ವಕಪ್‌ನ ಸೆಮೀಸ್‌ನಲ್ಲೂ ಎದುರಾಗಿದ್ದ ಉಭಯ ತಂಡಗಳು.
ದುಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಿರ್ಣಾಯಕ ಘಟ್ಟ ತಲುಪಿದ್ದು, ಗುರುವಾರ ಮೊದಲ ಸೆಮಿಫೈನಲ್‌ನಲ್ಲಿ 6 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. 2009ರ ಉದ್ಘಾಟನಾ ಆವೃತ್ತಿಯಿಂದ ಈ ವರೆಗೂ ಎಲ್ಲಾ 9 ಆವೃತ್ತಿಗಳಲ್ಲೂ ಆಸ್ಟ್ರೇಲಿಯಾ ಸೆಮಿಫೈನಲ್ ವರೆಗೂ ಸಾಗಿ ಬಂದಿದ್ದು, ಇದೀಗ 8ನೇ ಬಾರಿಗೆ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ.
2023ರ ಟಿ20 ವಿಶ್ವಕಪ್‌ನ ಸೆಮೀಸ್‌ನಲ್ಲೂ ಆಸ್ಟ್ರೇಲಿಯಾಕ್ಕೆ ದಕ್ಷಿಣ ಆಫ್ರಿಕಾವೇ ಎದುರಾಗಿತ್ತು. ಆ ಪಂದ್ಯವನ್ನು ಆಸೀಸ್ 19 ರನ್‌ಗಳಿಂದ ಗೆದ್ದು ಫೈನಲ್‌ಗೇರಿತ್ತು.ಅಂಕಿ-ಅಂಶಗಳನ್ನು ಗಮನಿಸಿದಾಗ, ಉಭಯ ತಂಡಗಳ ನಡುವಿನ ಮುಖಾಮುಖಿಯಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ದ.ಆಫ್ರಿಕಾ ವಿರುದ್ಧದ 10 ಟಿ20 ಪಂದ್ಯಗಳಲ್ಲಿ 9ರಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ಇನ್ನು ಟಿ20 ವಿಶ್ವಕಪ್‌ಗಳಲ್ಲಿ ಉಭಯ ತಂಡಗಳು 7 ಪಂದ್ಯಗಳಲ್ಲಿ ಪರಸ್ಪರ ಸೆಣಸಿದ್ದು, ಎಲ್ಲಾ 7ರಲ್ಲೂ ಆಸೀಸ್ ಜಯಭೇರಿ ಬಾರಿಸಿದೆ.
ಮೇಲ್ನೋಟಕ್ಕೆ ಆಸ್ಟ್ರೇಲಿಯಾ ತಂಡವೇ ಗೆಲ್ಲುವ ನೆಚ್ಚಿನ ತಂಡ ಎನಿಸುತ್ತಿದ್ದರೂ, ದ.ಆಫ್ರಿಕಾವನ್ನು ಲಘುವಾಗಿ ಪರಿಗಣಿಸುವಂತಿಲ್ಲ.ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್