ಮಹಿಳಾ ಟಿ20 ವಿಶ್ವಕಪ್‌ : ಟ್ರೋಫಿ ಕನಸಲ್ಲಿರುವ ಭಾರತಕ್ಕಿಂದು ನ್ಯೂಜಿಲೆಂಡ್‌ ಸವಾಲು

| Published : Oct 04 2024, 01:00 AM IST / Updated: Oct 04 2024, 03:31 AM IST

ಸಾರಾಂಶ

9ನೇ ಆವೃತ್ತಿ ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿ ಹರ್ಮನ್‌ಪ್ರೀತ್‌ ಪಡೆ. ಕಿವೀಸ್‌ನಿಂದ ಕಠಿಣ ಸ್ಪರ್ಧೆ ಸಾಧ್ಯತೆ. ಸ್ಮೃತಿ, ಹರ್ಮನ್‌, ರಿಚಾ, ಶಫಾಲಿ, ದೀಪ್ತಿ ಪ್ರಮುಖ ಆಕರ್ಷಣೆ. ಅವಕಾಶದ ನಿರೀಕ್ಷೆಯಲ್ಲಿ ರಾಜ್ಯದ ಶ್ರೇಯಾಂಕ. ಪಂದ್ಯಕ್ಕೆ ದುಬೈ ಆತಿಥ್ಯ

ದುಬೈ: ಭಾರತ ಪುರುಷರ ಕ್ರಿಕೆಟ್‌ ತಂಡ ಎಲ್ಲಾ ಐಸಿಸಿ ಟೂರ್ನಿಗಳಲ್ಲೂ ಚಾಂಪಿಯನ್‌ ಆಗಿದೆ. ಆದರೆ ಮಹಿಳಾ ತಂಡಕ್ಕೆ ಒಮ್ಮೆಯೂ ಈ ಅದೃಷ್ಟ ಒದಗಿ ಬಂದಿಲ್ಲ. ಹಲವು ದಶಕಗಳಿಂದಲೂ ಐಸಿಸಿ ಟ್ರೋಫಿಗಾಗಿ ಕಾಯುತ್ತಿರುವ ಮಹಿಳಾ ತಂಡ ಈ ವರ್ಷ ಅರಬ್‌ ನಾಡಿನಲ್ಲಿ ವಿಶ್ವಕಪ್‌ ಎತ್ತಿಹಿಡಿಯುವ ಕಾತರದಲ್ಲಿದೆ. 

ಚೊಚ್ಚಲ ಐಸಿಸಿ ಟ್ರೋಫಿಯ ಕನವರಿಕೆಯಲ್ಲಿರುವ ಟೀಂ ಇಂಡಿಯಾ ಶುಕ್ರವಾರ 9ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದಲ್ಲಿ 4ನೇ ಬಾರಿ ಟಿ20 ವಿಶ್ವಕಪ್‌ ಆಡುತ್ತಿರುವ ಭಾರತ, ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿಕೊಂಡಿದೆ.

 ಆದರೆ ತಂಡದ ವಿಶ್ವಕಪ್‌ ಹಾದಿ ಅಷ್ಟು ಸುಲಭದ್ದಲ್ಲ. ಗುಂಪು ಹಂತದಲ್ಲೇ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ. ಈ ಬಾರಿ ತಂಡ ಹಲವು ಅನುಭವಿಗಳು ಮಾತ್ರವಲ್ಲದೇ ಪ್ರತಿಭಾವಂತ ಯುವ ಕ್ರಿಕೆಟಿಗರೊಂದಿಗೆ ಕಣಕ್ಕಿಳಿಯಲಿದೆ. ಹರ್ಮನ್‌ಪ್ರೀತ್‌, ಸ್ಮೃತಿ ಮಂಧನಾ, ಜೆಮಿಮಾ ರೋಡ್ರಿಗ್ಸ್‌, ಶಫಾಲಿ ವರ್ಮಾ ಹಾಗೂ ರಿಚಾ ಘೋಷ್‌ ಬ್ಯಾಟಿಂಗ್‌ ಆಧಾರಸ್ತಂಭಗಳು ಎನಿಸಿಕೊಂಡಿದ್ದಾರೆ. 

ಅದರಲ್ಲೂ ಸ್ಮೃತಿ ಕಳೆದ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 3 ಅರ್ಧಶತಕ ಬಾರಿಸಿ ಉತ್ತಮ ಲಯದಲ್ಲಿದ್ದಾರೆ. ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್‌ ಆಲ್ರೌಂಡ್‌ ಆಟ ತಂಡಕ್ಕೆ ಅತ್ಯಗತ್ಯವೆನಿಸಿದ್ದು, ಕರ್ನಾಟಕದ ಯುವ ಆಲ್ರೌಂಡರ್‌ ಶ್ರೇಯಾಂಕ ಪಾಟೀಲ್‌ ಕೂಡಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.ತಂಡದ ವೇಗದ ಬೌಲಿಂಗ್‌ ವಿಭಾಗದಲ್ಲಿ ರೇಣುಕಾ ಸಿಂಗ್‌, ಪೂಜಾ ಹಾಗೂ ಅರುಂಧತಿ ರೆಡ್ಡಿ ಇದ್ದು, ಸ್ಪಿನ್ನರ್‌ಗಳಾದ ರಾಧಾ ಯಾದವ್‌, ಆಶಾ ಶೋಭನಾ ಮೇಲೆ ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿದೆ.

ಕಠಿಣ ಸ್ಪರ್ಧೆ: ಕಿವೀಸ್‌ ಈ ವರೆಗೂ ಟಿ20 ವಿಶ್ವಕಪ್‌ ಗೆಲ್ಲದಿದ್ದರೂ, ತಂಡ ಎಷ್ಟು ಬಲಿಷ್ಠವಾಗಿದೆ ಎಂಬುದು ಭಾರತಕ್ಕೆ ಚೆನ್ನಾಗಿ ಅರಿವಿದೆ. ಹೀಗಾಗಿ ಭಾರತಕ್ಕೆ ಕಠಿಣ ಸ್ಪರ್ಧೆ ಎದುರಾಗುವುದು ಖಚಿತ. ನಾಯಕಿ ಸೋಫಿ ಡಿವೈನ್‌, ಅನುಭವಿ ಆಲ್ರೌಂಡರ್ ಸುಜೀ ಬೇಟ್ಸ್‌, ಹಿರಿಯ ವೇಗಿಗಳಾದ ಲೀ ತಹುಹು, ಲೀಗ್‌ ಕ್ಯಾಸ್ಪೆರೆಕ್ ತಂಡದ ಪ್ರಮುಖ ಆಧಾರಸ್ತಂಭ. ಯುವ ಆಲ್ರೌಂಡರ್‌ ಅಮೇಲಿಯಾ ಕೇರ್‌ ಪ್ರದರ್ಶನ ತಂಡದ ಗೆಲುವು-ಸೋಲನ್ನು ನಿರ್ಧರಿಸುವಂತಿದೆ.

ಟಿ 20: ಭಾರತ ವಿರುದ್ಧ ಕಿವೀಸ್‌ಗೆ ಹೆಚ್ಚು ಯಶ

ಭಾರತ ಹಾಗೂ ನ್ಯೂಜಿಲೆಂಡ್‌ ಈ ವರೆಗೂ ಟಿ20ಯಲ್ಲಿ 13 ಬಾರಿ ಮುಖಾಮುಖಿಯಾಗಿದೆ. ಈ ಪೈಕಿ ಭಾರತ 4 ಪಂದ್ಯಗಳಲ್ಲಿ ಗೆದ್ದಿದ್ದರೆ, ನ್ಯೂಜಿಲೆಂಡ್‌ 9ರಲ್ಲಿ ಜಯಭೇರಿ ಬಾರಿಸಿದೆ. ಇತ್ತಂಡಗಳ ನಡುವಿನ ಕೊನೆ 5 ಪಂದ್ಯಗಳಲ್ಲಿ ಕಿವೀಸ್‌ 4ರಲ್ಲಿ ಗೆಲುವು ಸಾಧಿಸಿದೆ.ಒಟ್ಟು ಮುಖಾಮುಖಿ: 13ಭಾರತ: 04ನ್ಯೂಜಿಲೆಂಡ್‌: 09

ಸಂಭವನೀಯ ಆಟಗಾರರ ಪಟ್ಟಿಭಾರತ: ಶಫಾಲಿ, ಸ್ಮೃತಿ, ಹರ್ಮನ್(ನಾಯಕಿ), ಜೆಮಿಮಾ, ರಿಚಾ ಘೋಷ್‌, ದೀಪ್ತಿ, ಪೂಜಾ, ಶ್ರೇಯಾಂಕ, ಅರುಂಧತಿ, ರಾಧಾ ಯಾದವ್‌, ರೇಣುಕಾ ಸಿಂಗ್‌.ನ್ಯೂಜಿಲೆಂಡ್‌: ಬೇಟ್ಸ್‌, ಸೋಫಿ ಡಿವೈನ್‌(ನಾಯಕಿ), ಅಮೇಲಿಯಾ, ಬ್ರೂಕೆ, ಕ್ಯಾಸ್ಪೆರೆಕ್‌, ಪ್ಲಿಮ್ಮರ್‌, ಮ್ಯಾಡಿ ಗ್ರೀನ್‌, ಜೆಸ್‌ ಕೇರ್‌, ಕಾರ್ಸನ್‌, ಫ್ರಾನ್‌, ತಹುಹು

ಪಂದ್ಯ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಡಿಸ್ನಿ+ಹಾಟ್‌ಸ್ಟಾರ್‌.