ಸಾರಾಂಶ
2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಈಗಾಗಲೇ 21 ಪದಕ ಗೆದ್ದು ತನ್ನ ಸಾರ್ವಕಾಲಿಕ ಅಧಿಕ ಪದಕ ಸಾಧನೆಯನ್ನು ಮುರಿದಿದೆ.
ಪ್ಯಾರಿಸ್: 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 25 ಪದಕ ಗೆಲ್ಲಬಹುದು ಎನ್ನುವ ಕ್ಯೋಟಂತರ ಅಭಿಮಾನಿಗಳ ನಿರೀಕ್ಷೆ ನಿಜವಾಗುವ ಸಮಯ ಹತ್ತಿರವಾಗುತ್ತಿದೆ. ಭಾರತ ಈಗಾಗಲೇ ಕ್ರೀಡಾಕೂಟದಲ್ಲಿ ತನ್ನ ಸಾರ್ವಕಾಲಿಕ ಅಧಿಕ ಪದಕ ಸಾಧನೆಯನ್ನು ಮಾಡಿದ್ದು, 25 ಪದಕಗಳ ಮೈಲಿಗಲ್ಲಿನತ್ತ ದಾಪುಗಾಲಿರಿಸಿದೆ.
2020ರ ಟೋಕಿಯೋ ಪ್ಯಾರಾ ಗೇಮ್ಸ್‌ನಲ್ಲಿ ಭಾರತ 19 ಪದಕ ಗೆದ್ದಿತ್ತು. ಈ ವರೆಗೂ ಕ್ರೀಡಾಕೂಟದ ಇತಿಹಾಸದಲ್ಲಿ ಅದು ಭಾರತದ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ಎನಿಸಿತ್ತು. ಆದರೆ ಮಂಗಳವಾರ ಮಧ್ಯರಾತ್ರಿ ಭಾರತಕ್ಕೆ 4 ಪದಕಗಳು ಒಲಿದವು. ಇದರಿಂದಾಗಿ ಭಾರತ ತನ್ನ ದಾಖಲೆಯನ್ನು ಉತ್ತಮಗೊಳಿಸಿಕೊಂಡಿತು. ಇನ್ನು, ಬುಧವಾರ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಮತ್ತೊಂದು ಬೆಳ್ಳಿ ದೊರೆತಿದ್ದು, ದೇಶದ ಒಟ್ಟು ಪದಕ ಗಳಿಕೆ 21ಕ್ಕೆ ಏರಿಕೆಯಾಗಿದೆ. ಕ್ರೀಡಾಕೂಟ ಮುಗಿಯಲು ಇನ್ನೂ 4 ದಿನಗಳು ಬಾಕಿ ಇದ್ದು, ಭಾರತ 25 ಪದಕ ತಲುಪಿದರೆ ಅಚ್ಚರಿಯಿಲ್ಲ. ಏಷ್ಯನ್ ದಾಖಲೆಯೊಂದಿಗೆ
ಶಾಟ್‌ಪುಟ್ ಬೆಳ್ಳಿ ಗೆದ್ದ ಸಚಿನ್
ವಿಶ್ವ ಚಾಂಪಿಯನ್ ಸಚಿನ್ ಕಿಲಾರಿ ಪುರುಷರ ಶಾಟ್‌ಪುಟ್ ಎಫ್ 46 ವಿಭಾಗದಲ್ಲಿ 16.32 ಮೀ. ದೂರಕ್ಕೆ ಗುಂಡು ಎಸೆಯುವ ಮೂಲಕ ಏಷ್ಯನ್ ದಾಖಲೆಯೊಂದಿಗೆ ಬೆಳ್ಳಿ ಪದಕ ಜಯಿಸಿದರು. 34 ವರ್ಷದ ಕಿಲಾರಿ, ತಮ್ಮ 2ನೇ ಯತ್ನದಲ್ಲಿ ಈ ಸಾಧನೆ ಮಾಡಿದರು. ಕಳೆದ ಮೇ ತಿಂಗಳಲ್ಲಿ ಜಪಾನ್‌ನಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 16.30 ಮೀ. ಎಸೆಯುವ ಮೂಲಕ ಏಷ್ಯಾ ದಾಖಲೆ ನಿರ್ಮಿಸಿದ್ದ ಸಚಿನ್, ತಮ್ಮ ದಾಖಲೆಯನ್ನು ಉತ್ತಮಗೊಳಿಸಿಕೊಂಡರು.
ಕೆನಡಾದ ಗ್ರೆಗ್ ಸ್ಟೀವರ್ಟ್ 16.38 ಮೀ. ದೂರಕ್ಕೆ ಎಸೆಯುವ ಮೂಲಕ ಸತತ 2ನೇ ಚಿನ್ನ ಗೆದ್ದರೆ, ಕ್ರೊವೇಷಿಯಾದ ಲೂಕಾ ಬಕೊವಿಚ್ 16.27 ಮೀ. ದೂರಕ್ಕೆ ಎಸೆದು ಕಂಚು ಪಡೆದರು.
ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮೊಹಮದ್ ಯಾಸಿರ್ (14.21 ಮೀ.) ಹಾಗೂ ರೋಹಿತ್ ಕುಮಾರ್ (14.10 ಮೀ.) ಕ್ರಮವಾಗಿ 8 ಹಾಗೂ 9ನೇ ಸ್ಥಾನ ಪಡೆದರು. 11 ಪದಕ
ಪ್ಯಾರಿಸ್ ಪ್ಯಾರಾಗೇಮ್ಸ್‌ನಲ್ಲಿ ಸದ್ಯ ಭಾರತ ಗೆದ್ದಿರುವ 21 ಪದಕಗಳ ಪೈಕಿ ಪ್ಯಾರಾ ಅಥ್ಲೆಟಿಕ್ಸ್‌ನಲ್ಲೇ 11 ಪದಕ ದೊರೆತಿದೆ. --
ಏನಿದು ಎಫ್46 ವಿಭಾಗ?
ತೋಳಿನ ನ್ಯೂನತೆ, ತೋಳುಗಳಲ್ಲಿ ಬಲಹೀನತೆ ಅಥವಾ ತೋಳುಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಸಾಧ್ಯವಾಗದೆ ಇರುವ ಅಥ್ಲೀಟ್‌ಗಳು ಈ ವಿಭಾಗದಲ್ಲಿ ಸ್ಪರ್ಧೆ ಮಾಡುತ್ತಾರೆ. ಗುಂಡನ್ನು ನಿಂತುಕೊಂಡು ಎಸೆಯುತ್ತಾರೆ.
ಸಚಿನ್ ಎಂಜಿನಿಯರಿಂಗ್ ಪದವೀಧರ,
ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಮೆಂಟರ್!
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯವರಾದ ಸಚಿನ್, ಬಾಲ್ಯದಲ್ಲಿ ಸೈಕಲ್‌ನಿಂದ ಬಿದ್ದು ಗಾಯಗೊಂಡಿದ್ದರು. ಎಡತೋಳಿನ ಗ್ಯಾಂಗ್ರಿನ್‌ಗೆ ತುತ್ತಾಗಿದ್ದ ಅವರು ಹಲವು ಶಸ್ತ್ರಚಿಕಿತ್ಸೆಗೆ ಒಳಗಾದರೂ ಸಂಪೂರ್ಣ ಚೇತರಿಸಿಕೊಳ್ಳಲಿಲ್ಲ. ಆದರೆ, ಓದಿನಲ್ಲಿ ಮುಂದಿದ್ದ ಸಚಿನ್ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಅವರು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳಿಗೆ ಪಾಠವನ್ನೂ ಮಾಡುತ್ತಾರೆ.
2015ರಲ್ಲಿ ಪ್ಯಾರಾ ಕ್ರೀಡೆಗೆ ಕಾಲಿಟ್ಟ ಸಚಿನ್, ಕಳೆದ ವರ್ಷ ಪ್ಯಾರಾ ಏಷ್ಯಾಡ್‌ನಲ್ಲಿ ಚಿನ್ನ ಜಯಿಸಿದ್ದರು.