ಸಾರಾಂಶ
ಬಿಷ್ಕೆಕ್: ದುಬೈನಲ್ಲಿ ಭಾರಿ ಮಳೆಯಿಂದಾಗಿ ವಿಮಾನ ವಿಳಂಬಗೊಂಡ ಕಾರಣ ತಡವಾಗಿ ಕಿರ್ಗಿಸ್ತಾನದ ಬಿಷ್ಕೆಕ್ ತಲುಪಿದ ಭಾರತೀಯ ಕುಸ್ತಿಪಟುಗಳಾದ ದೀಪಕ್ ಪೂನಿಯಾ ಹಾಗೂ ಸುಜೀತ್ ಕಲಕಲ್‌ಗೆ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಲಾಗಿದೆ.
ಏ.2ರಿಂದ 15ರ ವರೆಗೆ ರಷ್ಯಾದಲ್ಲಿ ತರಬೇತಿ ಪಡೆದಿದ್ದ ದೀಪಕ್ ಹಾಗೂ ಸುಜೀತ್, ಏ.16ರಂದು ದುಬೈ ಮೂಲಕ ಬಿಷ್ಕೆಕ್ ತಲುಪಬೇಕಿತ್ತು. ಆದರೆ ಭಾರಿ ಮಳೆಯಿಂದಾಗಿ ದುಬೈನಲ್ಲಿ ಬಹುತೇಕ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ದುಬೈನಲ್ಲೇ ಬಾಕಿಯಾಗಿದ್ದ ದೀಪಕ್ ಹಾಗೂ ಸುಜೀತ್, ಶುಕ್ರವಾರ ಬಿಷ್ಕೆಕ್‌ಗೆ ತೆರಳಿದರೂ, ನಿಗದಿತ ಸಮಯ ಮೀರಿದ್ದರಿಂದ ಆಯೋಜಕರು ಸ್ಪರ್ಧೆಗೆ ಅವಕಾಶ ನಿರಾಕರಿಸಿದ್ದಾರೆ.ಆದರೆ ಇವರಿಬ್ಬರಿಗೂ ಒಲಿಂಪಿಕ್ಸ್ ಪ್ರವೇಶಿಸಲು ಮತ್ತೊಂದು ಅವಕಾಶವಿದೆ. ಮುಂದಿನ ತಿಂಗಳು ಟರ್ಕಿಯಲ್ಲಿ ವಿಶ್ವ ಒಲಿಂಪಿಕ್ಸ್ ಅರ್ಹತಾ ಟೂರ್ನಿ ನಡೆಯಲಿದ್ದು, ಅದರಲ್ಲಿ ಸ್ಪರ್ಧಿಸಿ ಗೆಲ್ಲಬೇಕಿದೆ.
ಒಲಿಂಪಿಕ್ಸ್ ಅರ್ಹತಾ ಕುಸ್ತಿ: ಸೆಮೀಸಲ್ಲಿ ಸೋತ ಅಮನ್
ಬಿಷ್ಕೆಕ್(ಕಜಕಸ್ತಾನ): ಇಲ್ಲಿ ನಡೆಯುತ್ತಿರುವ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಟೂರ್ನಿ ಕುಸ್ತಿಯಲ್ಲಿ ಭಾರತದ ಅಮನ್ ಶೆರಾವತ್ ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ. ಇದರೊಂದಿಗೆ ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತ ಯಾವುದೇ ಒಲಿಂಪಿಕ್ಸ್ ಕೋಟಾ ಗೆಲ್ಲಲು ವಿಫಲವಾಗಿದೆ.57 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ಅಮನ್, ಸೆಮೀಸ್‌ನಲ್ಲಿ ಉಜ್ಬೇಕಿಸ್ತಾನದ ಗುಲೊಮ್‌ಜೊನ್ ಅಬ್ದುಲ್ಲಾ ವಿರುದ್ಧ 0-10 ಅಂತರದಲ್ಲಿ ಪರಾಭವಗೊಂಡರು. ಇದೇ ವೇಳೆ 74 ಕೆ.ಜಿ. ವಿಭಾಗದಲ್ಲಿ ಜೈದೀಪ್ ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡರೆ, 97 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದ ದೀಪಕ್ ಅವರು ಅರ್ಹತಾ ಸುತ್ತಿನಲ್ಲೇ ಸೋತು ಅಭಿಯಾನ ಕೊನೆಗೊಳಿಸಿದರು. ಸುಮಿತ್(125 ಕೆ.ಜಿ.) ಕೂಡಾ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದರು.