ಸಾರಾಂಶ
ದುಬೈ: 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ ಮತ್ತಷ್ಟು ರೋಚಕತೆ ಹುಟ್ಟುಹಾಕಿದೆ. ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಟೆಸ್ಟ್‌ನಲ್ಲಿ ಭಾರತದ ಸೋಲು, ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಗೆಲುವು ಫೈನಲ್ ರೇಸ್‌ನಲ್ಲಿ ಸ್ಪಷ್ಟತೆ ನೀಡಿದರೂ, ಯಾವ ತಂಡ ಫೈನಲ್‌ಗೇರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗುವಂತೆ ಮಾಡಿದೆ.
ಆಸ್ಟ್ರೇಲಿಯಾ ವಿರುದ್ಧದ ಸೋಲನುಭವಿಸಿದ ಪರಿಣಾಮ, ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೆ ಕುಸಿದಿದೆ. ಪರ್ತ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ಭಾರತದ ಗೆಲುವಿನ ಪ್ರತಿಶತ ಶೇ.61.11ಕ್ಕೆ ಏರಿಕೆಯಾಗಿತ್ತು. ಅಡಿಲೇಡ್ ಸೋಲಿನಿಂದಾಗಿ ಅದು ಶೇ.57.29ಕ್ಕೆ ಇಳಿದಿದೆ. ಸೋಮವಾರ ಶ್ರೀಲಂಕಾ ವಿರುದ್ಧ ಗೆಲುವಿನ ಬಳಿಕ ದ.ಆಫ್ರಿಕಾ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ತಂಡ ಸದ್ಯ ಶೇ.63.33 ಗೆಲುವಿನ ಪ್ರತಿಶತ ಹೊಂದಿದ್ದರೆ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ(ಶೇಕಡಾ 60.71) 2ನೇ ಸ್ಥಾನಕ್ಕೆ ಕುಸಿದಿದೆ.
ಸದ್ಯ ಈ ಮೂರು ತಂಡಗಳೇ ಫೈನಲ್‌ಗೇರುವ ಫೇವರಿಟ್. ಶ್ರೀಲಂಕಾ ಶೇ.45.45 ಗೆಲುವಿನ ಪ್ರತಿಶತದೊಂದಿಗೆ 4ನೇ ಸ್ಥಾನದಲ್ಲಿದ್ದು, ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಇನ್ನು, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ, ವೆಸ್ಟ್‌ಇಂಡೀಸ್ ತಂಡಗಳು ಫೈನಲ್ ರೇಸ್‌ನಿಂದ ಈಗಾಗಲೇ ಹೊರಬಿದ್ದಿವೆ.
7 ಪಂದ್ಯಗಳು ಬಾಕಿ: ಈ ಬಾರಿ ಚಾಂಪಿಯನ್‌ಶಿಪ್‌ನಲ್ಲಿ ಇನ್ನು ಹಲವು ಪಂದ್ಯಗಳು ಬಾಕಿಯಿದ್ದರೂ, ಫೈನಲ್ ರೇಸ್‌ಗೆ ಮಹತ್ವ ತಂದುಕೊಡಲಿರುವ ಪಂದ್ಯಗಳು ಕೇವಲ 7 ಮಾತ್ರ. ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ 3, ದ.ಆಫ್ರಿಕಾ ಹಾಗೂ ಪಾಕಿಸ್ತಾನ ನಡುವೆ 2, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವೆ 2 ಪಂದ್ಯಗಳು ನಡೆಯಬೇಕಿವೆ. ಈ ಪಂದ್ಯಗಳಲ್ಲೇ ಫೈನಲ್‌ಗೇರುವ ತಂಡ ಯಾವುದೆಂದು ನಿರ್ಧಾರವಾಗಲಿದೆ.
ತಂಡಗಳ ಫೈನಲ್ ಲೆಕ್ಕಾಚಾರ ಹೇಗೆ?1. ದ.ಆಫ್ರಿಕಾಕ್ಕೆ ಇನ್ನು ಪಾಕಿಸ್ತಾನ ವಿರುದ್ಧ ತವರಿನಲ್ಲಿ 2 ಪಂದ್ಯ ಬಾಕಿಯಿದೆ. ಈ ಪೈಕಿ 1ರಲ್ಲಿ ಗೆದ್ದರೂ ದ.ಆಫ್ರಿಕಾ ಫೈನಲ್‌ಗೇರಲಿದೆ.2. ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ 3, ಶ್ರೀಲಂಕಾ ವಿರುದ್ಧ ಸೇರಿ ಒಟ್ಟು 5 ಪಂದ್ಯವಾಡಬೇಕಿದೆ. ಈ ಪೈಕಿ 3ರಲ್ಲಿ ಗೆದ್ದರೆ ಮಾತ್ರ ತಂಡ ಫೈನಲ್‌ಗೆ.3. ಭಾರತಕ್ಕಿನ್ನು 3 ಪಂದ್ಯ ಬಾಕಿ. 2ರಲ್ಲಿ ಗೆದ್ದು, 1 ಡ್ರಾ ಮಾಡಿಕೊಂಡರೂ ಫೈನಲ್‌ಗೆ. ಒಂದು ಪಂದ್ಯದಲ್ಲಿ ಸೋತರೂ ಇತರ ತಂಡಗಳ ಫಲಿತಾಂಶದ ಮೇಲೆ ಭಾರತದ ಫೈನಲ್ ಭವಿಷ್ಯ ನಿರ್ಧಾರವಾಗಲಿದೆ.
ಹೇಗಿದೆ ಭಾರತದ ಫೈನಲ್ ಹಾದಿ? (3 ಪಂದ್ಯ ಬಾಕಿ)
1. ಆಸ್ಟ್ರೇಲಿಯಾ ವಿರುದ್ಧ ಉಳಿದ 3 ಪಂದ್ಯಗಳಲ್ಲೂ ಗೆದ್ದರೆ ಭಾರತ ಫೈನಲ್‌ಗೆ ಖಚಿತ.2. 3ರ ಪೈಕಿ 2 ಗೆದ್ದು, 1 ಡ್ರಾ ಮಾಡಿಕೊಂಡರೂ ಭಾರತಕ್ಕಿದೆ ಫೈನಲ್ ಅವಕಾಶ.3. ಭಾರತ 2ರಲ್ಲಿ ಗೆದ್ದು 1ರಲ್ಲಿ ಸೋತರೆ, ಆಗ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 2 ಪಂದ್ಯಗಳ ಪೈಕಿ 1ರಲ್ಲಿ ಡ್ರಾ ಮಾಡಿಕೊಳ್ಳಬೇಕು. ಹೀಗಾದರೆ ಭಾರತ ಫೈನಲ್‌ಗೆ4. ಭಾರತ 1ರಲ್ಲಿ ಗೆದ್ದು, 1 ಸೋಲು, 1 ಡ್ರಾ ಮಾಡಿಕೊಂಡರೆ, ಆಗ ಶ್ರೀಲಂಕಾ ತಂಡ ಆಸ್ಟ್ರೇಲಿಯಾವನ್ನು 2-0 ಅಥವಾ 1-0 ಅಂತರದಲ್ಲಿ ಸೋಲಿಸಬೇಕು. ಹೀಗೂ ಭಾರತಕ್ಕೆ ಫೈನಲ್‌ಗೇರಬಹುದು.