ಸಾರಾಂಶ
ಜೈಸ್ವಾಲ್ ಈ ವರೆಗೆ ಕೇವಲ 8 ಪಂದ್ಯಗಳನ್ನಾಡಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಪಾದಾರ್ಪಣೆ ಮಾಡಿದ್ದ ಜೈಸ್ವಾಲ್ ಕೇವಲ 9 ತಿಂಗಳಲ್ಲೇ ಟಾಪ್-10ಗೆ ಕಾಲಿಟ್ಟಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಗಣನೀಯ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ದುಬೈ: ಭಾರತದ ಯುವ, ತಾರಾ ಬ್ಯಾಟರ್ ಯಶಸ್ವಿ ಜೈಸ್ವಾಲ್ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಇದೇ ಮೊದಲ ಬಾರಿ ಅಗ್ರ-10ಕ್ಕೆ ಕಾಲಿಟ್ಟಿದ್ದಾರೆ.ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಆರ್ಭಟಿಸುತ್ತಿರುವ 22ರ ಜೈಸ್ವಾಲ್ ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್ ಪಟ್ಟಿಯಲ್ಲಿ 2 ಸ್ಥಾನ ಜಿಗಿತ ಕಂಡಿದ್ದು, 727 ರೇಟಿಂಗ್ ಅಂಕದೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಪಾದಾರ್ಪಣೆ ಮಾಡಿದ್ದ ಜೈಸ್ವಾಲ್ ಕೇವಲ 9 ತಿಂಗಳಲ್ಲೇ ಟಾಪ್-10ಗೆ ಕಾಲಿಟ್ಟಿದ್ದಾರೆ. ಅವರು ಈ ವರೆಗೆ ಕೇವಲ 8 ಪಂದ್ಯಗಳನ್ನಾಡಿದ್ದಾರೆ. 15 ಇನಿಂಗ್ಸ್ಗಳಿಂದ ಒಟ್ಟು 971 ರನ್ ಕಲೆ ಹಾಕಿರುವ ಅವರು ಅತಿ ಕಡಿಮೆ ಅವಧಿಯಲ್ಲಿ ಗಣನೀಯ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.ಇದೇ ವೇಳೆ ಇಂಗ್ಲೆಂಡ್ ಸರಣಿಗೆ ಗೈರಾದ ಹೊರತಾಗಿಯೂ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ 1 ಸ್ಥಾನ ಮೇಲೇರಿ 8ನೇ ಸ್ಥಾನ ಪಡೆದಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ 11ನೇ ಸ್ಥಾನದಲ್ಲಿದ್ದು, ಭೀಕರ ಕಾರು ಅಪಘಾತದ ಬಳಿಕ ದೀರ್ಘ ಸಮಯದಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದರೂ ರಿಷಭ್ ಪಂತ್ 14ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ತಾರಾ ವೇಗಿ ಜಸ್‌ಪ್ರೀತ್ ಬೂಮ್ರಾ ನಂ.1 ಸ್ಥಾನದಲ್ಲೇ ಮುಂದುವರಿದಿದ್ದು, ಸ್ಪಿನ್ನರ್ ಆರ್.ಅಶ್ವಿನ್ 2ನೇ ಸ್ತಾನದಲ್ಲಿದ್ದಾರೆ.