ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಈಗ ವಿಶ್ವ ನಂ.15 ಬ್ಯಾಟರ್‌!

| Published : Feb 22 2024, 01:48 AM IST

ಸಾರಾಂಶ

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸತತ 2 ದ್ವಿಶತಕ ಸಿಡಿಸಿರುವ ಭಾರತದ ಯುವ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರ-20ರೊಳಗೆ ಪ್ರವೇಶ ಪಡೆದಿದ್ದಾರೆ.

ದುಬೈ: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸತತ 2 ದ್ವಿಶತಕ ಸಿಡಿಸಿರುವ ಭಾರತದ ಯುವ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರ-20ರೊಳಗೆ ಪ್ರವೇಶ ಪಡೆದಿದ್ದಾರೆ. 14 ಸ್ಥಾನಗಳ ಏರಿಕೆ ಕಂಡಿರುವ ಜೈಸ್ವಾಲ್‌ ಸದ್ಯ 15ನೇ ಸ್ಥಾನದಲ್ಲಿದ್ದಾರೆ.ರಾಜ್‌ಕೋಟ್‌ ಪಂದ್ಯದಲ್ಲಿ ಜೈಸ್ವಾಲ್‌ ಔಟಾಗದೆ 214 ರನ್‌ ಗಳಿಸಿ, ಸತತ ಎರಡು ಟೆಸ್ಟ್‌ಗಳಲ್ಲಿ ದ್ವಿಶತಕ ಬಾರಿಸಿದ ಭಾರತದ 3ನೇ ಹಾಗೂ ವಿಶ್ವದ 7ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದಿದ್ದ 2ನೇ ಟೆಸ್ಟ್‌ನಲ್ಲಿ ಜೈಸ್ವಾಲ್‌ 209 ರನ್‌ ಸಿಡಿಸಿದ್ದರು.ತಮ್ಮ ತವರು ಮೈದಾನದಲ್ಲಿ ಆಕರ್ಷಕ ಶತಕ ಬಾರಿಸಿ, ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರವೀಂದ್ರ ಜಡೇಜಾ ಸಹ ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ. ಕಳೆದ ವಾರ 41ನೇ ಸ್ಥಾನದಲ್ಲಿದ್ದ ಜಡೇಜಾ ಸದ್ಯ 34ನೇ ಸ್ಥಾನ ಪಡೆದಿದ್ದಾರೆ. ರೋಹಿತ್‌ ಶರ್ಮಾ ಒಂದು ಸ್ಥಾನ ಏರಿಕೆ ಕಂಡು 12ನೇ ಸ್ಥಾನ ಪಡೆದರೆ, ಶುಭ್‌ಮನ್‌ ಗಿಲ್‌ 3 ಸ್ಥಾನಗಳ ಏರಿಕೆ ಸಾಧಿಸಿ 35ನೇ ಸ್ಥಾನ ಗಳಿಸಿದ್ದಾರೆ.ರಾಜ್‌ಕೋಟ್‌ ಪಂದ್ಯದಲ್ಲಿ 7 ವಿಕೆಟ್‌ ಸಹ ಪಡೆದಿದ್ದ ಜಡೇಜಾ, ಬೌಲರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 3 ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದಿದ್ದಾರೆ. ಆರ್‌.ಅಶ್ವಿನ್‌ ಒಂದು ಸ್ಥಾನ ಏರಿಕೆ ಕಂಡಿದ್ದು 2ನೇ ಸ್ಥಾನದಲ್ಲಿದ್ದರೆ, ಜಸ್‌ಪ್ರೀತ್‌ ಬೂಮ್ರಾ ಅಗ್ರಸ್ಥಾನಿಯಾಗಿ ಮುಂದುವರಿದಿದ್ದಾರೆ.ಇನ್ನು ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಜಡೇಜಾ ಹಾಗೂ ಅಶ್ವಿನ್‌ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.